ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

10:17 AM, Tuesday, February 25th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

BJP

ಮಂಗಳೂರು : ನೂತನ ಜಿಲ್ಲಾಧ್ಯಕ್ಷರ ಪದಗ್ರಹಣವೆಂದರೆ ಅಧಿಕಾರ ಸ್ವೀಕಾರ ಮಾತ್ರವಲ್ಲ; ಮುಂದಿನ ಗ್ರಾ. ಪಂ. ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಜಯ ದಾಖ ಲಿಸುವುದಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 8 ಶಾಸಕ ಸ್ಥಾನಗಳನ್ನು ಗೆಲ್ಲುವ ಪ್ರತಿಜ್ಞೆಯನ್ನು ಸ್ವೀಕರಿಸುವ ಕಾರ್ಯಕ್ರಮವೂ ಹೌದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಸೋಮವಾರ ಜರಗಿದ ಬಿಜೆಪಿ ದಕ್ಷಿಣ ಕನ್ನಡ ನೂತನ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಅವರ ಪದಗ್ರಹಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಕಟಪೂರ್ವ ಅಧ್ಯಕ್ಷ ಸಂಜೀವ ಮಠಂದೂರು ಅವರು ಸವಾಲುಗಳ ಮಧ್ಯೆ ಅಧಿಕಾರ ಸ್ವೀಕರಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದಾರೆ. ಆ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೇರಿಸುವ ಹೊಣೆ ನೂತನ ಅಧ್ಯಕ್ಷರದು. ಈ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನೆ-ಮನೆಗಳಿಗೆ ಬಿಜೆಪಿಯನ್ನು ಮುಟ್ಟಿಸುವ ಕಾರ್ಯ ಮಾಡಬೇಕು. ಆ ಮೂಲಕ ದ.ಕ.ವನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸುದರ್ಶನ್‌ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷ ಸಂಜೀವ ಮಠಂದೂರು ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ತನ್ನ ಅವಧಿಯಲ್ಲಿ ಪಕ್ಷದ ಪದಾಧಿಕಾರಿಗಳಾಗಿದ್ದವರನ್ನು ಸಮ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಬಂದ ನನ್ನನ್ನು ಸಂಘದ ಮಾರ್ಗದರ್ಶನ ಈ ಮಟ್ಟಕ್ಕೆ ಬೆಳೆಸಿದೆ. ಯಾವುದೇ ಹುದ್ದೆಯ ನಿರೀಕ್ಷೆಯಲ್ಲಿ ಬಂದವ ನಾನಲ್ಲ. ವಹಿಸಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಅದನ್ನು ಗುರುತಿಸಿರುವ ಪಕ್ಷ ಇದೀಗ ಜಿಲ್ಲಾಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ವಹಿಸಿದೆ ಎಂದರು.

BJP

ನನ್ನ ಮುಂದೆ ಸವಾಲುಗಳಿವೆ. ಸಮನ್ವಯದಿಂದ ಸಂಘಟನಾತ್ಮಕವಾಗಿ ಕಾರ್ಯವೆಸಗುತ್ತಾ ಜಿಲ್ಲೆಯಲ್ಲಿ ಬಿಜೆಪಿ ಹೊಂದಿರುವ ಭದ್ರ ಬುನಾದಿಯನ್ನು ಉಳಿಸಿ ಇನ್ನಷ್ಟು ಭದ್ರಪಡಿಸುವ ಕಾರ್ಯವನ್ನು ಪಕ್ಷದ ಹಿರಿಯರ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಮಾರ್ಗದರ್ಶನ, ಕಾರ್ಯಕರ್ತರ ಬೆಂಬಲದೊಂದಿಗೆ ಮಾಡುತ್ತೇನೆ ಎಂದವರು ಹೇಳಿದರು.

ಶಾಸಕರಾದ ಎಸ್‌. ಅಂಗಾರ, ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಉಮಾನಾಥ ಕೋಟ್ಯಾನ್‌, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಡಲ ಅಧ್ಯಕ್ಷರಾದ ವಿಜಯ ಕುಮಾರ್‌ ಶೆಟ್ಟಿ, ತಿಲಕ್‌ರಾಜ್‌, ದೇವಪ್ಪ ಪೂಜಾರಿ, ಚಂದ್ರಹಾಸ ಪಂಡಿತ್‌ಹೌಸ್‌, ಸುನೀಲ್‌ ಆಳ್ವ, ಜಗನ್ನಿವಾಸ ರಾವ್‌, ಸಾಜಾ ರಾಧಾಕೃಷ್ಣ ಆಳ್ವ, ಹರೀಶ್‌ ಕಂಜಿಪಿಲಿ ಉಪಸ್ಥಿತರಿದ್ದರು.

ಶಾಸಕ ವೇದವ್ಯಾಸ ಕಾಮತ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಧೀರ್‌ ಶೆಟ್ಟಿ ಕಣ್ಣೂರು ವಂದಿಸಿದರು. ದೇವದಾಸ ಶೆಟ್ಟಿ ನಿರೂಪಿಸಿದರು.

ರಾಜ್ಯದಲ್ಲಿ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು ಜನರ ಕಣ್ಣೀರು ಹರಿಸಿದರು. 14 ತಿಂಗಳ ಕಾಲ ಮುಖ್ಯಮಂತ್ರಿಯಾದವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಣ್ಣೀರು ಸುರಿಸುವುದರಲ್ಲೇ ಕಾಲ ಕಳೆದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ ನಳಿನ್‌ ಕುಮಾರ್‌ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನೂ ಕೂಡ ಪಕ್ಷಕ್ಕೆ ಅಧ್ಯಕ್ಷರನ್ನು ಹೊಂದಲು ಸಾಧ್ಯವಾಗದ ಕಾಂಗ್ರೆಸ್‌ಗೆ ಇನ್ನು ದೇಶವನ್ನು ಮುನ್ನಡೆಸಲು ಸಾಧ್ಯವೇ ಎಂದವರು ಪ್ರಶ್ನಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English