ಮಡಿಕೇರಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಗೌರವಕ್ಕೆ ದಕ್ಕೆ ತರುವ ರೀತಿಯ ಹೇಳಿಕೆಯನ್ನು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸದ ಬಿಜೆಪಿ ಪಕ್ಷದ ಶಾಸಕರು ಇದೀಗ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆಸ್ವಾಮಿ ಅವರು ಪ್ರಸ್ತುತ ಪ್ರಗತಿಪರ ಚಿಂತಕರು, ದುರ್ಬಲರು, ಶೋಷಿತರು ಮತ್ತು ಜನಸಾಮಾನ್ಯರ ಧ್ವನಿಯಾಗಿ ತಮ್ಮ ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹಿರಿಯ ಜೀವಕ್ಕೆ ಗೌರವ ನೀಡದೆ ಕೀಳುಮಟ್ಟದ ಭಾಷೆಯನ್ನು ಬಳಸಿ ಅವಮಾನಿಸಿದ್ದಾರೆ.
ಇಂತಹ ರಾಜಕಾರಣಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಟೀಕಿಸಿರುವ ಸುರೇಶ್, ರಾಜ್ಯಪಾಲರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English