ಮಂಗಳೂರು : ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಐಕ್ಯತೆ, ಬದ್ಧತೆ ಮತ್ತು ಶಿಸ್ತುಗಳೆಂಬ ಜೀವನ ಮೌಲ್ಯಗಳು ಅಭಿವ್ಯಕ್ತಿಯ ಕೇಂದ್ರವಾಗಿರುವ ಕ್ರೀಡೋತ್ಸವವು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್(ರಿ)ನ. ಸ್ಥಾಪಕಾಧ್ಯಕ್ಷಾರಾದ ಶ್ರೀ ಎಸ್. ಗಣೇಶ್ ರಾವ್ ಇವರು ಕರಾವಳಿ ಕಾಲೇಜುಗಳ ಸಮೂಹದ ಅಂತರ್ ಕಾಲೇಜು ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿ ಹೇಳಿದರು.
ಅವರು ಮುಂದುವರೆದು, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಸಾಧನೆಯ ಮಾರ್ಗವನ್ನು ಕ್ರಮಿಸಲು ಅವಕಾಶ ಮಾಡಿಕೊಡುವ ಕ್ರೀಡಾಸ್ಪರ್ಧೆಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು ಆತ್ಮೀಯತೆಯಿಂದ ಎಲ್ಲರನ್ನೂ ಪ್ರೋತ್ಸಹಿಸುತ್ತಾ ಅವರ ಯಶಸ್ಸನ್ನು ಗೌರವಿಸಬೇಕು. ಸ್ನೇಹಪರ ವಾತವರಣದೊಂದಿಗೆ ಪರಸ್ಪರ ಪ್ರೀತಿ ಗೌರವನ್ನು ಬದುಕಿನಲ್ಲಿ ಆಳವಡಿಸಿಕೊಂಡು ಉತ್ತಮ ಚಿಂತನೆಗಳಿಂದ ಸಾಧನೆಯ ಮಾರ್ಗದಲ್ಲಿ ಮುನ್ನಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀ ವೇದವ್ಯಾಸ್ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ಇವರು ಮಾತನಾಡಿ ತನ್ನ ವ್ಯಕ್ತಿತ್ವರೂಪಿಸುವಲ್ಲಿ ಎಸ್. ಗಣೇಶ್‌ರಾವ್ ಅವರ ಪಾತ್ರ ಮಹತ್ತರವಾದದು. ನನ್ನ ಗುರು ಹಾಗೂ ಸಹೋದರನಂತೆ ನನಗೆ ಮಾರ್ಗದರ್ಶನ ನೀಡಿದ ಗಣೇಶ್‌ರಾವ್ ಸರ್ ಇವರಿಗೆ ಎಂದಿಗೂ ನಾನು ಚಿರಋಣಿ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಇವರು ಮಾದರಿ ವ್ಯಕ್ತಿತ್ವವನ್ನು ಹೊಂದಿರುವ ಧೀಮಂತ ನಾಯಕ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು. ಆದರ್ಶ ನಾಯಕನ ಗುಣಗಳನ್ನು ನೀವೂ ಆಳವಡಿಸಿಕೊಳ್ಳಿ. ಸಂಸ್ಥೆಗೆ, ನಾಡಿಗೆ ಹೆಮ್ಮೆ ತರುವಲ್ಲಿ ಶ್ರಮಿಸಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಶ್ರೀಮತಿ ಲತಾ. ಜಿ. ರಾವ್ ಹಾಗೂ ಕರಾವಳಿ ಕಾಲೇಜುಗಳ ಸಮೂಹದ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಅಂಜುಂ ಅರಾ ನಿರೂಪಿಸಿದರು, ವಿದ್ಯಾರ್ಥಿಗಳಾದ ನಿಶಾತ್ ಸ್ವಾಗತಿಸಿದರು ಹಾಗೂ ಸಿಸಿಲಿಯ ವಂದಿಸಿದರು.
Click this button or press Ctrl+G to toggle between Kannada and English