ಮಂಗಳೂರು : ಒಂದು ಊರು ಅಭಿವೃದ್ಧಿಯಾಗಬೇಕಾದರೆ ಜನಸಾಮಾನ್ಯರು ಸರಕಾರದೊಂದಿಗೆ ಕೈಜೋಡಿಸಿದರೆ ಮಾತ್ರ ಸಾಧ್ಯ. ಉಳ್ಳಾಲದ ಕೆಲವು ಸ್ಥಳಗಳಲ್ಲಿ ಚರಂಡಿಗಳಲ್ಲಿ ಕಸವು ತುಂಬಿಕೊಂಡಿದೆ. ಅದನ್ನು ಶುಚಿಗೊಳಿಸಬಹುದು. ಆದರೆ ಕೆಲವು ದಿನಗಳಲ್ಲಿ ಮತ್ತೆ ಅದೇ ಪರಿಸ್ಥಿತಿ ಬರುತ್ತದೆ. ಇದೆಲ್ಲ ಕಡಿಮೆ ಆಗಬೇಕಾದರೆ ಉಳ್ಳಾಲದಲ್ಲಿ ಒಳ ಚರಂಡಿ ಬರದೆ ಯಾವುದೂ ಸಾಧ್ಯವಾಗುವುದಿಲ್ಲ. ಯಾವ ಊರಿನಲ್ಲಿ ಒಳಚರಂಡಿ ಇಲ್ಲ ಅದು ಸ್ಲಂ ಆಗುತ್ತದೆ ಎಂದು ಮಾಜಿ ಸಚಿವರು ಮತ್ತು ಶಾಸಕರಾಗಿರುವ ಯು.ಟಿ. ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಹರು ಯುವ ಕೇಂದ್ರ ಮಂಗಳೂರು, ಉಳ್ಳಾಲ ನಗರಸಭೆ, ತಾಲೂಕು ಯುವಜನ ಒಕ್ಕೂಟ(ರಿ.) ಮಂಗಳೂರು, ಮಾರುತಿ ಯುವಕ ಮಂಡಲ(ರಿ.) ಉಳ್ಳಾಲ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಹಾಗೂ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ನಗರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನೆರೆಹೊರೆ ಯುವ ಸಂಸತ್ತು ಎಂಬ ವಿನೂತನ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪರಿಸರ ಇಲಾಖೆಯ ತಜ್ಞರಾದ ಮಹೇಶ್ ಕುಮಾರ್‌ರವರು ನದಿ ಪರಿಸರ ಸವಾಲುಗಳು ಮತ್ತು ಪರ್ಯಾಯ ಉದ್ಯೋಗಾವಕಾಶಗಳು ಎಂಬ ಬಗ್ಗೆ ವಿಷಯ ಮಂಡನೆ ಮಾಡಿದರು. ನೇತ್ರಾವತಿ ನದಿಯಲ್ಲಿ ಪ್ರಾಥಮಿಕ ಉತ್ಪಾದಕ ಸಾಮರ್ಥ್ಯ ಕಡಿಮೆಯಾಗಿದೆ.
ರಾಸಾಯನಿಕಗಳು ನದಿಯಲ್ಲಿ ಸೇರಿ ನೀರು ಮಲಿನಗೊಂಡಿರುವ ಕಾರಣ ಮೀನುಗಳು ಕಡಿಮೆಯಾಗಿವೆ. ಉಳ್ಳಾಲದ ನದಿ ಪರಿಸರದಲ್ಲಿ ಕಾಂಡ್ಲಾ ಗಿಡಗಳು ತುಂಬಾ ಇವೆ. ಕಾಂಡ್ಲಾ ಇದ್ದರೆ ಮೀನು ಜಾಸ್ತಿ. ಅದನ್ನು ಕಡಿಯದಂತೆ ರಕ್ಷಿಸುವ ಅರಿವನ್ನು ಜನರಲ್ಲಿ ಮೂಡಿಸಬೇಕಾಗಿದೆ. ಡ್ರೈನೇಜ್ ನೀರನ್ನಾಗಲೀ, ಬಚ್ಚಲು ನೀರನ್ನಾಗಲೀ ನದಿ-ಹೊಳೆಗೆ ಬಿಡಬಾರದು. ನದಿ ಪರಿಸರದಲ್ಲಿ ಉದ್ಯೋಗಾವಕಾಶಗಳು ಆಗಬೇಕಾದರೆ ನದಿ ಪರಿಸರವನ್ನು ಮಾಲಿನ್ಯ ಮಾಡದಿರುವುದೇ ಮೊದಲ ಹೆಜ್ಜೆ. ಪ್ಲಾಸ್ಟಿಕ್ ಮತ್ತಿತರ ಅಪಾಯಕಾರೀ ತ್ಯಾಜ್ಯಗಳನ್ನು ನದಿಗೆ ಹಾಕಲೇಬಾರದು. ನದಿ ಬಯಲಿನಲ್ಲಿ ಕೊಳಗಳನ್ನು ನಿರ್ಮಾಣ ಮಾಡಿ ಮೀನು ಕೃಷಿ, ಏಡಿ ಕೃಷಿ ಮಾಡಬಹುದು. ನದಿಗೆ ಹರಿದು ಬರುವ ಕಾಲುವೆಗಳನ್ನು ಯಾರೂ ತಡೆಯಬಾರದು. ರಾಜಾ ಕಾಲುವೆಗಳನ್ನು ಉಳಿಸಬೇಕು. ಹಕ್ಕಿಗಳು ಪ್ರಕೃತಿಯ ಜಾಡಮಾಲಿಗಳು; ನೀರು ಮಲಿನವಾಗಿದ್ದಲ್ಲಿ ಹಕ್ಕಿಗಳು ಬರುವುದಿಲ್ಲ ಎಂದು ಮಹೇಶ್ ಕುಮಾರ್‌ರವರು ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನದಿ ಪರಿಸರ ಮತ್ತು ಸ್ವಚ್ಛ ಭಾರತದ ಬಗ್ಗೆ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ರಾಯಪ್ಪ, ಯುವಜನತೆ ಮತ್ತು ಸಮಾಜ ಸೇವೆಯ ಬಗ್ಗೆ ಉಳ್ಳಾಲದ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಧ್ಯಕ್ಷರಾದ ಮುಸ್ತಾಕ್ ಪಟ್ಲ, ನದಿ ಪರಿಸರ ಸಂರಕ್ಷಣೆ ಮತ್ತು ಅಭಿಯಾನದ ಬಗ್ಗೆ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ವಿಸ್ತರಣಾ ವಿಭಾಗದ ನಿರ್ದೇಶಕರಾದ ಕಿಶೋರ್ ಅತ್ತಾವರ್ ವಿಷಯ ಮಂಡನೆ ಮಾಡಿದರು.
ಮಂಗಳೂರಿನ ರೋಶನಿ ನಿಲಯದ ವಿದ್ಯಾರ್ಥಿಗಳ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಪ್ರಮುಖರಾದ ಸುರೇಶ್ ಜನಾರ್ದನ್ ಸ್ವಾಗತಿಸಿದರು, ನಾಗರಿಕ ಒಕ್ಕೂಟದ ಸಂಚಾಲಕರಾದ ಮಂಗಳೂರು ರಿಯಾಝ್ ಪ್ರಾಸ್ತಾವಿಕ ಮಾತನಾಡಿದರು. ಉಳ್ಳಾಲ ಮಾರುತಿ ಯುವಕ ಮಂಡಲದ ಅಧ್ಯಕ್ಷರಾದ ಅಶ್ವಿನ್ ಕೋಟ್ಯಾನ್, ಉಳ್ಳಾಲ ಹೊಗೆಯ ಹಿರಿಯ ಸಮಾಜ ಸೇವಕರಾದ ಹೆರಾಲ್ಡ್ ಡಿ’ಸೋಜ ಮತ್ತು ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ರಝಿಯಾ ಇಬ್ರಾಹಿಂ ಒಟ್ಟಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲವು ಸಿದ್ಧಗೊಳಿಸಿರುವ ಕರಪತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಉಳ್ಳಾಲ ನಗರಸಭೆಯ ಪೌರಾಯುಕ್ತರಿಗೆ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಸದಸ್ಯರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಹಾಗೂ ಮಲಿನಗೊಂಡಿರುವ ಉಳ್ಳಾಲ ನದಿ ಪರಿಸರವನ್ನು ಅಧ್ಯಯನ ಮಾಡುವ ಕುರಿತು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮಂಗಳೂರಿನ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್‌ರವರು ಉಳಿಯ ಪರಿಸರದಲ್ಲಿ ನಡೆಯುತ್ತಿರುವ ನದಿ ಪರಿಸರ ಸಂರಕ್ಷಣಾ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿ ಮಾತನಾಡಿದರು. ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಪ್ರಮುಖರಾದ ಸುಂದರ ಉಳಿಯ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಲೋಯೆಡ್ ಆರ್ ಡಿಸೋಜ ಧನ್ಯವಾದ ಸಮರ್ಪಿಸಿದರು.
ರಝಿಯಾ ಇಬ್ರಾಹಿಂ ಪೆರ್ಮನ್ನೂರು, ವೀಣಾ ಶಾಂತಿ ಡಿ‘ಸೋಜ ಉಳಿಯ, ಯು.ಎ. ಇಸ್ಮಾಯಿಲ್ ಕಕ್ಕೆತೋಟ, ಅಯೂಬ್ ಮಂಚಿಲ ಮಾರ್ಗತಲೆ, ರೇಶ್ಮಾ ಜಗದೀಶ್ ಕೊಟ್ಟಾರ, ರಮೀಝ್ ಸೇನೆರೆ ಬೈಲ್,
ಅಬ್ದುಲ್ ಅಜೀಝ್ ಕೋಡಿ, ರುಕಿಯಾ ಬಾನು ಕೋಟೆಪುರ, ಪ್ರೊ|| ಇವಲಿನ್ ಬೆನಿಸ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷರಾದ ಅಬ್ದುಲ್ ಕರೀಮ್‌ರವರು ಗೌರವ ಉಪಸ್ಥಿತರಾಗಿ ಆಹ್ವಾನಿತರಾಗಿದ್ದರು. ಉಳ್ಳಾಲ ಭಾರತ್ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ಎಂ. ವಾಸುದೇವ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
Click this button or press Ctrl+G to toggle between Kannada and English