ಗೌಹಾತಿ : ಚೀನಾ ಸೇರಿದಂತೆ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಈ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ಈ ವೈರಸ್ ಬಾಧಿಸುವವರಿಗೆ ಔಷಧಿ ಕಂಡುಹಿಡಿಯುವ ನಿಟ್ಟಿನಲ್ಲಿ ವಿಶ್ವ ವೈದ್ಯ ಸಮೂಹವೇ ತಲೆಕೆಡಿಸಿಕೊಂಡು ಕೂತಿದೆ.
ಆದರೆ ಇತ್ತ ಅಸ್ಸಾಂ ವಿಧಾನಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿರುವ ಭಾರತೀಯ ಜನತಾ ಪಕ್ಷದ ಶಾಸಕಿ ಸುಮನ್ ಹರಿಪ್ರಿಯಾ ಅವರು ಗೋಮೂತ್ರ ಮತ್ತು ಸಗಣಿ ಕೊರೋನಾ ವೈರಸ್ ತಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋಮೂತ್ರ ಹಾಗೂ ಸಗಣಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಹಾಗೆಯೇ ಗೋಮೂತ್ರವನ್ನು ಸಿಂಪಡಿಸಿದ ಸ್ಥಳ ಶುದ್ಧಿಯಾಗುತ್ತದೆ ಎಂಬ ನಂನಿಕೆಯೂ ಇದೆ. ಅದೇ ರೀತಿಯಲ್ಲಿ ಇದೀಗ ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ವೈರಸ್ ನಿಯಂತ್ರಿಸಲೂ ಸಹ ಇವರಡನ್ನು ಬಳಸಿ ಏನಾದರೂ ಮಾಡಬುಹುದು ಎಂದು ಅವರು ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಹೇಳಿದರು.
ಬಾಂಗ್ಲಾದೇಶಕ್ಕೆ ಭಾರತದಿಂದ ದನ ಕಳ್ಳಸಾಗಾಣಿಕೆ ಕುರಿತಾದ ವಿಷಯದ ಮೇಲೆ ಅಸ್ಸಾಂ ವಿಧಾನಸಭೆಯಲ್ಲಿ ಮಾತನಾಡುತ್ತಾ ಬಿಜೆಪಿ ಶಾಸಕಿ ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಭಾರತದಿಂದ ಕಳ್ಳಸಾಗಾಟಗೊಂಡ ದನಗಳ ಮೇಲೆ ಅಲ್ಲಿನ ಆರ್ಥಿಕತೆ ಸದೃಢಗೊಂಡಿದೆ ಎಂದು ಅವರು ತಮ್ಮ ಚರ್ಚೆಯ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ. ಆ ಎಲ್ಲಾ ದನಗಳು ನಮ್ಮ ದನಗಳೇ. ನಮ್ಮಲ್ಲಿಂದ ಅಲ್ಲಿಗೆ ದನಗಳ ಕಳ್ಳಸಾಗಾಟವನ್ನು ತಡೆಯಲು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಯಾವ ಪ್ರಯತ್ನಗಳನ್ನೂ ಮಾಡಿರಲಿಲ್ಲ ಎಂದು ಶಾಸಕಿ ಸುಮನ್ ಹರಿಪ್ರಿಯಾ ಅವರು ವಿಧಾನಸಭೆಯಲ್ಲಿ ಹೇಳಿದರು.
Click this button or press Ctrl+G to toggle between Kannada and English