ನವದೆಹಲಿ : ಭಾರತಕ್ಕೆ ಆಗಮಿಸಿರುವ 15 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೊನಾ ವೈರಸ್ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿರುವುದಾಗಿ ದೆಹಲಿಯ ಏಮ್ಸ್ ಆಸ್ಪತ್ರೆ ಬುಧವಾರ ಖಚಿತಪಡಿಸಿದೆ.
ಎಲ್ಲ 15 ಇಟಲಿ ಪ್ರವಾಸಿಗರನ್ನು ದೆಹಲಿಯ ಚಾವ್ಲಾ ಏರಿಯದಲ್ಲಿರುವ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಬಂಧಿಸಲಾಗಿದ್ದು, ಏಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟು 21 ಮಂದಿ ಇಟಲಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು. ಅದರಲ್ಲಿ 15 ಮಂದಿಗೆ ಪಾಸಿಟಿವ್ ಕೊರೊನಾ ವೈರಸ್ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಭಾರತದಲ್ಲಿ ಒಟ್ಟು ಆರು ಮಂದಿಗೆ ಕೊರೊನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರು ಮಂದಿಯಲ್ಲಿ ರಾಜಸ್ಥಾನದಲ್ಲಿರುವ ಇಟಾಲಿಯನ್ ದಂಪತಿ, ಬೆಂಗಳೂರಿನ ಟೆಕ್ಕಿ ಹಾಗೂ ಇಟಲಿಯಿಂದ ಭಾರತಕ್ಕೆ ಆಗಮಿಸಿದ ಓರ್ವರು ಸೇರಿದ್ದಾರೆ.
ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ನಿನ್ನೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ ಕೊರೊನಾ ವೈರಸ್ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ.
ಇಟಲಿಯಿಂದ ಬಂದಿದ್ದ ದೆಹಲಿ ನಿವಾಸಿಯೊಬ್ಬರು ಆಯೋಜಿಸಿದ್ದ ಪಾರ್ಟಿಗೆ ನೋಯ್ಡಾದ ಎರಡು ಶಾಲೆಯ ಕೆಲ ವಿದ್ಯಾರ್ಥಿಗಳು ತೆರಳಿದ್ದರಿಂದ ಕೊರೊನಾ ವೈರಸ್ ಹರಡಿದೆ ಎಂದು ಹೇಳಲಾಗಿದ್ದು, ಎರಡು ಶಾಲೆಯನ್ನು ಸದ್ಯ ಶುಚಿಗೊಳಿಸಲಾಗಿದೆ.
ಇಟಲಿಯಿಂದ ಬಂದಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಆಗ್ರಾ ವ್ಯಕ್ತಿಗಳಿಗೂ ಕೊರೊನಾ ವೈರಸ್ ಲಕ್ಷಣಗಳಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಸದ್ಯ ದೇಶದಲ್ಲೂ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಎಲ್ಲೆಡೆ ತೀವ್ರ ನಿಗಾವಹಿಸಲಾಗಿದೆ.
Click this button or press Ctrl+G to toggle between Kannada and English