ಉಡುಪಿ : ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲೆಯಲ್ಲಿ ಕರೋನಾ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಕಾರ್ಯ ನಿರ್ವಹಿಸಲು, ಸರ್ಕಾರ ಸೂಚಿಸಿರುವ ವಿವಿಧ ಅಧಿಕಾರಿಗಳ ನೇತೃತ್ವದ ಸಮಿತಿಗಳನ್ನು ರಚಿಸುವಂತೆ ಹಾಗೂ ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಹಾಗೂ ಜಿಲ್ಲೆಯ ಪ್ರತಿ ದಿನದ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ, ಜಿಲ್ಲಾಡಳಿತ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಅನಗತ್ಯ ವದಂತಿಗಳಿಂದ ಸಾರ್ವಜನಿಕರು ಭಯ ಭೀತರಾಗದಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ವಾಸುದೇವ ಉಪಾದ್ಯಾಯ ಮಾತನಾಡಿ, ಕೊರೋನಾ ವೈರಸ್ ಶಂಕಿತರಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ ಗಳ ಕೊಠಡಿಯನ್ನು ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 3 ಬೆಡ್ ಗಳ ಕೊಠಡಿಯನ್ನು ಕಾಯ್ದಿರಿಸಲಾಗಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾಯಕ್ರಮಗಳನ್ನು ಆಯೋಜಿಸಲಾಗುತ್ತಿದೆ , ಶಂಕಿತ ರೋಗಿಗಳು ಕಂಡು ಬಂದಲ್ಲಿ ಅವರ ಮೂಗು, ಗಂಟಲು ಸ್ರಾವದ ಮಾದರಿ ಮತ್ತು ರಕ್ತದ ಮಾದರಿಯನ್ನು ತುರ್ತಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮುಧುಸೂಧನ್ ನಾಯಕ್, ಮಣಿಪಾಲ ಕೆಎಂಸಿ ಯ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English