ಬೆಂಗಳೂರು : ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಈ ಬಾರಿ 2,37,893 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.
ಕಳೆದ ಬಾರಿಯ ಸರ್ಕಾರ ಮಂಡಿಸಿದ್ದ ಬಜೆಟ್ ಗಾತ್ರದಕ್ಕಿಂತ ಈ ಬಾರಿ 3 ಸಾವಿರ ಕೋಟಿ ಹೆಚ್ಚು ಇದೆ. ಮಹದಾಯಿ ಯೋಜನೆ ಮೊದಲಾದ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚು ಒತ್ತುಕೊಡಲಾಗಿದೆ. ಹಾಗೆಯೇ, ಸಿದ್ದರಾಮಯ್ಯ ಸರ್ಕಾರದ ಬಹುತೇಕ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ.
ಭಾಗ್ಯಲಕ್ಷ್ಮೀ ಯೋಜನೆ, ಮಕ್ಕಳಿಗೆ ಬೈಸಿಕಲ್ ವಿತರಣೆ ಇತ್ಯಾದಿ ಯೋಜನೆಗಳನ್ನು ಮುಂದುವರಿಸಲು ಬಜೆಟ್ನಲ್ಲಿ ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿ ಆಶಯದಂತೆ ಬಜೆಟ್ ರೂಪಿಸಿದ್ದೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ ಸಿಎಂ ಬಿ ಎಸ್ ಯಡಿಯೂರಪ್ಪ, ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡಲು 1 ಅಂಶಗಳ ಕಾರ್ಯಸೂಚಿ ರೂಪಿಸಲಾಗಿದೆ. ಕೃಷಿಗೆ ಶೇ. 9.5 ರಷ್ಟು ಅನುದಾನ ನೀಡಲಾಗುತ್ತದೆ. ಈ ವರ್ಷ ಕೃಷಿ ಉತ್ಪಾದನೆ ಇನ್ನಷ್ಟು ಹೆಚ್ಚಳವಾಗುತ್ತದೆ ಎಂದರು.
ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ ವಿತರಣೆ: ಸಿರಿಧಾನ್ಯ ಬೆಳೆಯಲು ಉತ್ತೇಜನ; ಪ್ರತೀ ಹೆಕ್ಟೇರ್ಗೆ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಹಾಗೆಯೇ, ಮಹದಾಯಿ ಯೋಜನೆಗೆ 500 ಕೋಟಿ ರೂ ಬಿಡುಗಡೆ ಮಾಡಲಾಗಿದೆ.
ಇದಕ್ಕೂ ಮುನ್ನ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಮೊದಲ ಬಜೆಟ್ ಮಂಡನೆ ಗದ್ದಲದಲ್ಲೇ ಆರಂಭಗೊಂಡಿತು. ಬಿಎಸ್ವೈ ಬಜೆಟ್ ಮಂಡನೆ ಆರಂಭಿಸುತ್ತಿರುವಂತೆಯೇ ವಿಪಕ್ಷ ಸದಸ್ಯರು ಬಜೆಟ್ ಪ್ರತಿ ನೀಡಬೇಕೆಂದು ಬೇಡಿಕೆ ಮುಂದಿಟ್ಟರು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಲೇ ಬಜೆಟ್ ಕಾಪಿ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಹೊತ್ತು ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ವಿಪಕ್ಷ ಸದಸ್ಯರು ಗಲಾಟೆ ಪ್ರಾರಂಭಿಸುತ್ತಿರುವಂತೆಯೇ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ಬಜೆಟ್ ಪ್ರತಿ ವಿತರಿಸುವಂತೆ ಸೂಚಿಸಿದರು. ಅದೇ ವೇಳೆ, ಸ್ಪೀಕರ್ ಕಾಗೇರಿ ಅವರು ಬಜೆಟ್ ಪ್ರತಿ ವಿತರಿಸದೇ ಇರುವ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು. ಇದು ಈಗಿನಿಂದ ಬಂದಿರುವ ಸಂಪ್ರದಾಯವಲ್ಲ. ಹಿಂದಿನ ಸರ್ಕಾರ ಕೂಡ ಬಜೆಟ್ ಪ್ರತಿ ವಿತರಿಸಿರಲಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದರು.
ಸ್ಪೀಕರ್ ವಾದವನ್ನು ವಿಪಕ್ಷ ಸದಸ್ಯರು ಒಪ್ಪಲಿಲ್ಲ. ದಾಖಲೆ ಕೊಡಿ ಎಂದು ಕೂಗಾಟ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ಮಧ್ಯಪ್ರವೇಶ ಮಾಡಿ ಎಲ್ಲರಿಗೂ ಬಜೆಟ್ ಕಾಪಿ ನೀಡುವಂತೆ ಸೂಚಿಸಿದರು. ಆಗ ಕಾಗೇರಿ ಕೂಡ ಎಲ್ಲರಿಗೂ ಬಜೆಟ್ ಪ್ರತಿ ವಿತರಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಬಜೆಟ್ ಪ್ರತಿ ನೀಡುವಂತೆ ಮುಖ್ಯಮಂತ್ರಿಗಳು ಹೇಳಿದ್ಧಾರೆ. ನಾನೂ ನನ್ನ ಸ್ವಯಂ ಅಧಿಕಾರ ಬಳಸಿ ಎಲ್ಲರಿಗೂ ಬಜೆಟ್ ವಿತರಿಸುತ್ತೇನೆ, ಶಾಂತವಾಗಿರಿ ಎಂದು ಸದನ ಸದಸ್ಯರಿಗೆ ಸಭಾಧ್ಯಕ್ಷ ಕಾಗೇರಿ ತಿಳಿಸಿದರು. ಆ ನಂತರ ವಿಪಕ್ಷ ಸದಸ್ಯರು ಶಾಂತಗೊಂಡರು. ಸಿಎಂ ಬಿ ಎಸ್ ಯಡಿಯೂರಪ್ಪ ತಮ್ಮ ಬಜೆಟ್ ಮಂಡನೆ ಪ್ರಾರಂಭ ಮಾಡಿದರು.
Click this button or press Ctrl+G to toggle between Kannada and English