ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಜೈಲ್ ಭರೋ ಚಳುವಳಿ

3:42 PM, Friday, March 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

mahila-dinacharane

ಮಂಗಳೂರು : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ, ಸಿಐಟಿಯು ಹಾಗೂ ಜನವಾದಿ ಮಹಿಳಾ ಸಂಘಟನೆಯ ಜಂಟಿ ನೇತ್ರತ್ವದಲ್ಲಿ ನಗರದಲ್ಲಿ 06.03.2020 ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಜೈಲ್ ಭರೋ ಚಳುವಳಿಯನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು, “ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳ್ಳಲಿ,ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಲ್ಲಲಿ,ಮಹಿಳೆಯರಿಗೂ ಸಮಾನ ವೇತನ ಜಾರಿಯಾಗಲಿ” ಮುಂತಾದ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷರಾದ ಜಯಂತಿ ಬಿ.ಶೆಟ್ಟಿಯವರು, “ಜಗತ್ತಿನಾದ್ಯಂತ ಸಮರಧೀರ ಹೋರಾಟಗಳನ್ನು ನಡೆಸಿದ್ದರ ಪರಿಣಾಮ ದುಡಿಯುವ ಮಹಿಳೆಯರು 109 ವರ್ಷಗಳ ಹಿಂದೆ ಗಳಿಸಿದ್ದ ಬೇಡಿಕೆಗಳನ್ನು ಇಂದು ವ್ಯವಸ್ಥಿತವಾಗಿ ಇನ್ನಿಲ್ಲವಾಗಿಸಲು ಬಂಡವಾಳಶಾಹಿಗಳು ಪಿತೂರಿ ನಡೆಸುತ್ತಿದ್ದಾರೆ.ಅದರ ಜೊತೆಗೆ ಮಹಿಳೆಯರ ಮೇಲಿನ ಧಾಳಿ ದಬ್ಬಾಳಿಕೆಗಳು,ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುವ ಮೂಲಕ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಮಹಿಳೆಯರನ್ನು ಮಾತೆಯರೆಂದು ಬೊಗಳೆ ಬಿಡುವ ಕೇಂದ್ರದ ನರೇಂದ್ರ ಮೋದಿ ಸರಕಾರವು ಅತ್ಯಾಚಾರ ಹಲ್ಲೆ ಕೊಲೆ ನಡೆಸುವ ಆರೋಪಿಗಳಿಗೆ ರಕ್ಷಣೆ ನೀಡುವ ಮೂಲಕ ಮಹಿಳಾ ವಿರೋಧಿ ಸರಕಾರವೆಂದು ಸಾಬೀತಾಗಿದೆ” ಎಂದು ಕಿಡಿಕಾರಿದರು.

ದುಡಿಯುವ ಮಹಿಳೆಯರ ಜಿಲ್ಲಾ ಮುಖಂಡರೂ,ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಮಾತನಾಡುತ್ತಾ, “ದೇಶದ ಜನಸಂಖ್ಯೆಯಲ್ಲಿ 50%ದಷ್ಟಿರುವ ಮಹಿಳೆಯರು ದೇಶದ ಅಭಿವ್ರದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.ಆದರೆ ದೇಶದ ಸಂಸತ್ತಿನಲ್ಲಿ ಬೆರಳೆಣಿಕೆಯಷ್ಟು ಮಹಿಳಾ ಸಂಸದರಿರುವುದು ವಿಪರ್ಯಾಸವಾಗಿದೆ.ಮಹಿಳಾ ವಿರೋಧಿ,ರೈತ ಕಾರ್ಮಿಕ ವಿರೋಧಿ,ಸಂವಿಧಾನ ವಿರೋಧಿ ಕಾನೂನುಗಳನ್ನು ಯಾವುದೇ ಮುಲಾಜಿಲ್ಲದೆ ಬಹುಮತದಿಂದ ಅಂಗೀಕರಿಸುವ ನಮ್ಮ ದೇಶದ ಸಂಸತ್ತು,ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ ಅಂಗೀಕರಿಸಲು ಮೀನಮೇಷ ಎನಿಸುತ್ತಿದೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ದಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, “ಸಮಾಜದಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳಿಗೆ ಮೊದಲ ಬಲಿಪಶು ಮಹಿಳೆ. ಜಾಗತೀಕರಣ, ಖಾಸಗೀಕರಣ,ಉದಾರೀಕರಣ ನೀತಿಗಳಾಗಲೀ,ಸಮಾಜದ ಅನಿಷ್ಠಗಳಾದ ಜಾತಿ ತಾರತಮ್ಯ,ಅಸ್ಪ್ರಶ್ಯತೆಗಳಾಗಲೀ,ಕೋಮುವಾದವಾಗಲೀ, ದೇಶವನ್ನಾಳುವ ಸರಕಾರಗಳ ಬೆಲೆಯೇರಿಕೆಗಳಂತಹ ಜನವಿರೋಧಿ ನೀತಿಗಳಾಗಲೀ ಇವೆಲ್ಲದರಲ್ಲೂ ಮಹಿಳೆಯರನ್ನು ಮೊದಲು ಬಲಿತೆಗೆದುಕೊಳ್ಳುವ ಮೂಲಕ ಮಹಿಳಾ ಹಕ್ಕುಗಳನ್ನು ಕಸಿದುಕೊಂಡು,ಮಹಿಳಾ ಸಬಲೀಕರಣಕ್ಕೆ ತಡೆಯೊಡ್ಡಲಾಗುತ್ತಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ.ಇದು ಕೇವಲ ಕೆಳವರ್ಗದ ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಮಾತ್ರವಲ್ಲದೆ ಉನ್ನತ ಕ್ಷೇತ್ರಗಳಲ್ಲೂ ವಿಪರೀತವಾಗಿ ನಡೆಯುತ್ತಿದೆ. ಅತ್ಯಂತ ನಿರ್ದಯವಾಗಿ ದುಡಿಸಿಕೊಳ್ಳುವ ಮಹಿಳೆಯರಿಗೆ ಸಮಾನ ವೇತನ ನೀಡಲು ಇಂದಿಗೂ ಹಿಂಜರಿಯಲಾಗುತ್ತಿದೆ‌.ಪಾಲನೆ ಪೋಷಣೆ ಹೆಸರಿನಲ್ಲಿ ಮಹಿಳೆಯರನ್ನು ನಿಕ್ರಷ್ಟವಾಗಿ ದುಡಿಸಲಾಗುತ್ತಿದೆ” ಎಂದು ಹೇಳಿದರು.

ಸಿಐಟಿಯು ದ.ಕ‌.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡಿ, “ಕೇಂದ್ರ ಸರಕಾರವು ಜಾರಿಗೆ ತರಲು ಹೊರಟ ಸಂವಿಧಾನ ವಿರೋಧಿ ಕಾಯಿದೆಗಳಾದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಗಳು ಕೇವಲ ಮುಸ್ಲಿಂ ಸಮುದಾಯದ ವಿರುದ್ದವಲ್ಲ,ಅದು ಈ ದೇಶದ ಮಹಿಳಾ ವಿರೋಧಿ,ಕಾರ್ಮಿಕ ವಿರೋಧಿ ಸೇರಿದಂತೆ ಇಡೀ ದೇಶದ ವಿರೋಧಿಯಾಗಿದೆ. ಇಂತಹ ಕರಾಳ ಕಾಯಿದೆಯ ವಿರುದ್ದ ಮಹಿಳೆಯರು ಸಂಘಟಿತರಾಗಿ ಹೋರಾಟ ನಡೆಸಬೇಕೆಂದು” ಕರೆ ನೀಡಿದರು.

ಹೋರಾಟದ ನೇತ್ರತ್ವವನ್ನು ದುಡಿಯುವ ಮಹಿಳೆಯರ ಮುಖಂಡರಾದ ಗಿರಿಜಾ ಮೂಡಬಿದ್ರೆ, ವಿಲಾಸಿನಿ,ರಾಧಾ ಮೂಡಬಿದ್ರೆ,ವಸಂತಿ ಕುಪ್ಪೆಪದವು,ಲೋಲಾಕ್ಷಿ,ಪುಷ್ಪ, ಜೆಎಂಎಸ್ ಜಿಲ್ಲಾ ಮುಖಂಡರಾದ ರಮಣಿ ಮೂಡಬಿದ್ರೆ, ಜಯಲಕ್ಷ್ಮಿ,ರೋಹಿಣಿ ಜಲ್ಲಿಗುಡ್ಡ,ಸುಮತಿ ಅಡ್ಯಾರ್, ಮುಂತಾದವರು ವಹಿಸಿದ್ದರು.

ಈ ಸಂಧರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ,ಜಿಲ್ಲಾ ಮುಖಂಡರಾದ ಯು.ಬಿ.ಲೋಕಯ್ಯ,ಸದಾಶಿವದಾಸ್,ನೋಣಯ್ಯ ಗೌಡ,ಗಂಗಯ್ಯ ಅಮೀನ್ ರವರು ಉಪಸ್ಥಿತರಿದ್ದರು.

ಬಳಿಕ ಪೋಲೀಸರು ಜೈಲ್ ಭರೋ ಚಳುವಳಿಯ ಭಾಗವಾಗಿ ಬಂಧಿಸಿ,ಬಳಿಕ ಬಿಡುಗಡೆಗೊಳಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English