ಮುಂಬೈ : ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ಹಾಗೂ ಮಾಜಿ ಸಿಇಒ ರಾಣಾ ಕಪೂರ್ ಅವರ ಮುಂಬೈ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.
ನಷ್ಟದಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್(ಡಿಎಚ್ಎಫ್ಎಲ್) ಜೊತೆ ಯೆಸ್ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಣಾ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.
ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಕಪೂರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ರಾಣಾ ಕಪೂರ್ ಅವರು ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ನೋಟಿಸ್ ನೀಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತನ್ನ ಆರ್ಥಿಕ ಸ್ಥಿತಿಯಲ್ಲಿ ಗಂಭೀರ ಕುಸಿತದಿಂದಾಗಿ ತೊಂದರೆಗೀಡಾದ ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ಮೇಲೆ ಹಿಡಿತ ಸಾಧಿಸಿದ ಕೆಲವೇ ಗಂಟೆಗಳ ನಂತರ ಇಡಿ ರಾಣಾ ಕಪೂರ್ ನಿವಾಸದ ಮೇಲೆ ದಾಳಿ ನಡೆಸಿದೆ.
ಯೆಸ್ ಬ್ಯಾಂಕಿನಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಲು ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ನಿಯೋಜಿಸಲು ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಕೇಳಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಯೆಸ್ ಬ್ಯಾಂಕ್ 2017 ರಿಂದ ಕಾವಲಿನಲ್ಲಿದೆ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ದಿನನಿತ್ಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ‘ಎಂದು ಹಣಕಾಸು ಸಚಿವಾಲಯ ಹೇಳಿದೆ.
Click this button or press Ctrl+G to toggle between Kannada and English