ದೀಪಗಳ ಹಬ್ಬ ದೀಪಾವಳಿಯಲ್ಲಿ ಕತ್ತಲು ಬದುಕಿಗೆ ಬೆಳಕು ಮೂಡಲಿ

12:45 PM, Tuesday, November 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Mahabaarathaಮಂಗಳೂರು :ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು. ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ ಸಾರುತ್ತದೆ.

ಮಹಾಭಾರತದ ಒಂದು ಪ್ರಸಂಗ ಇಲ್ಲಿ ಉಲ್ಲೇಖನೀಯ, ಯುಗಾವತಾರಿ ಶ್ರೀ ಕೃಷ್ಣನು ಅದೊಂದು ದಿನ ಕೌರವನಲ್ಲಿ ಉಭಯ ಕುಶಲೋಪರಿ ಸಂದರ್ಭ ಕೇಳುತ್ತಾನೆ “ಲೋಕದ ಜನರು ಹೇಗೆ?”. ಅದಕ್ಕೆ ದುರ್ಯೋಧನನ ಉತ್ತರ – “ಎಲ್ಲರೂ ಕೆಟ್ಟವರು, ಎಲ್ಲರೂ ಸ್ವಾರ್ಥಿಗಳು”. ಅದೇ ಪ್ರಶ್ನೆಯನ್ನು ಶ್ರೀಕೃಷ್ಣನು ಯುಧಿಷ್ಠಿರನ ಮುಂದಿಡುತ್ತಾನೆ. ಧರ್ಮಜ್ಞಾನಿಯಾದ ಧರ್ಮರಾಯನ ಉತ್ತರ ಹೀಗಿರುತ್ತದೆ. “ಭಗವಾನ್, ಲೋಕದಲ್ಲಿರುವವರು ಎಲ್ಲರೂ ಒಳ್ಳೆಯವರು”.

ಈ ಪ್ರಸಂಗ ಇಲ್ಲಿ ಉಲ್ಲೇಖಿಸಿದ್ದೇಕೆ? ಹೌದು. ಮನದ ಅಂಧಕಾರ ತೊಲಗಿದರೆ ಜೀವನ ಸ್ವರ್ಗಸಮಾನ, ಜಗತ್ತನ್ನು ನಾವು ಯಾವ ದೃಷ್ಟಿಯಿಂದ ಕಾಣುತ್ತೇವೆ ಎಂಬುದು ಇಲ್ಲಿ ಬಹಳ ಮುಖ್ಯ. ನಮ್ಮ ಈ ಮನಸ್ಸಿನ ಭಾವನೆಯೇ ಕನ್ನಡಿಯಂತೆ ಕೆಲಸ ಮಾಡುತ್ತದೆ. ಜಗತ್ತು ಕೆಟ್ಟದು ಅಂತ ನಾವು ತಿಳಿದುಕೊಂಡರೆ, ಎಲ್ಲವೂ ಕೆಟ್ಟದೇ ಮತ್ತು ಎಲ್ಲರೂ ಕೆಟ್ಟವರೇ. ಅದೇ, ಲೋಕವೆಷ್ಟು ಸುಂದರ ಅಂತ ಅರಿತುಕೊಂಡು ಮುಂದಡಿಯಿಟ್ಟರೆ, ನಮ್ಮಲ್ಲಿ ನಕಾರಾತ್ಮಕ ಮನೋಭಾವವಿಲ್ಲದೆ, ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡರೆ… ಪ್ರತಿ ಕ್ಷಣವೂ ಸುಂದರ, ಪ್ರತಿ ಕಾರ್ಯವೂ ಸುಲಲಿತ.

ದೀಪಾವಳಿ ಎಂಬುದು ಬೆಳಕಿನ ಆವಳಿ. ಸಾಲು ಸಾಲು ಬೆಳಕಿನ ಹಣತೆಗಳನ್ನಿರಿಸಿ ಅಜ್ಞಾನವೆಂಬ ಅಂಧಕಾರವನ್ನು ನೀಗಿಸುವ, ಎಲ್ಲೆಲ್ಲೂ ಸುಜ್ಞಾನದ ಬೆಳಕು ಬೆಳಗಿಸುವುದನ್ನು ಸಂಕೇತಿಸುವ ಪರ್ವ. ಮಹಾಭಾರತದ ಈ ಪ್ರಸಂಗವು ನಮಗೆ ನೀಡುವ ಸಂದೇಶವೂ ಅದೇ. ನಮ್ಮನ್ನು ಅಜ್ಞಾನವೆಂಬ ಅಂಧಕಾರದ ಪೊರೆ ಆವರಿಸಿಕೊಂಡಿದೆ. ಈ ಪೊರೆ ಕಳಚಿಕೊಳ್ಳುವಂತೆ ಮಾಡಿ ಸುಜ್ಞಾನ ಪಥದತ್ತ ನಮ್ಮನ್ನು ಒಯ್ದು ಜ್ಞಾನ ಚಕ್ಷುವನ್ನು ತೆರೆದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಅಜ್ಞಾನದ ಅಂಧಕಾರ ನಿವಾರಿಸುವುದಕ್ಕೆ ದೀಪಗಳನ್ನು ಬೆಳಗುವುದು ಸಾಂಕೇತಿಕ ರೂಪವಾದರೂ, ನಮ್ಮನ್ನು ನಾವು ತಿದ್ದಿಕೊಂಡು ಮುನ್ನಡೆಯಬೇಕೆಂಬ ಮನೋಭಾವ ನಮ್ಮಲ್ಲಿ ಒಡಮೂಡಬೇಕು. ಇದು ನಮ್ಮ ಆತ್ಮಶಕ್ತಿಯ ದ್ಯೋತಕವೂ ಹೌದು, ಯಶಸ್ಸಿನ ಚಂದ್ರಯಾನ ಮಾಡಿಸಬಲ್ಲ ಗುರಿಯೂ ಹೌದು. ಲೋಕವಿಂದು ಅಕ್ಷರಶಃ ಅಂಧಕಾರಮಯವಾಗಿಬಿಟ್ಟಿದೆ. ಸತ್ಯವಂತರಿಗಿದು ಕಾಲವಲ್ಲ ಅಂತ ಯಾವತ್ತೋ ದಾಸವರೇಣ್ಯರು ಹಾಡಿದ್ದಾರೆ. ಸುಖ ಲೋಲುಪತೆಯೇ ಪರಮಗುರಿಯಾಗಿಬಿಟ್ಟಿದೆ. ಅನ್ಯಾಯ-ಅನಾಚಾರಗಳು ಮೇರೆ ಮೀರುತ್ತಿವೆ.

ಹಣದಿಂದಲೇ ಎಲ್ಲವೂ ಸಾಧ್ಯ ಎಂಬ ಮನೋಭಾವ. ಜೀವನದಲ್ಲಿ ಮೇಲೆ ಬರಲು, ಯಶಸ್ಸಿನ ತುತ್ತ ತುದಿಗೇರಲು ಏನು ಮಾಡಲೂ ಹೇಸುವುದಿಲ್ಲ. ಇದನ್ನೆಲ್ಲಾ ಯೋಚಿಸಿದರೆ, ಇದಕ್ಕೆ ಮೂಲ ಕಾರಣ ನಮ್ಮ ಅಂಧಕಾರದಿಂದ ತುಂಬಿದ ಮನಸ್ಥಿತಿ ಎಂಬುದು ಅರಿವಿಗೆ ಬರುತ್ತದೆ. “ತಪ್ಪು ಮಾಡೋದು ಸಹಜ…. ತಿದ್ದಿ ನಡೆಯೋನು ಮನುಜ” ಎಂಬ ವಾಕ್ಯವು ಮನುಷ್ಯತ್ವವನ್ನು ಅದೆಷ್ಟು ರಮ್ಯವಾಗಿ ವ್ಯಾಖ್ಯಾನಿಸುತ್ತದೆ! ಯಾವಾಗ ಒಬ್ಬಾತನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆಯೋ… ಅಂದಿನಿಂದಲೇ ಆತ ಯಶಸ್ಸಿನ ಮೆಟ್ಟಿಲೇರಲಾರಂಭಿಸಿದ್ದಾನೆ. ಅದಕ್ಕೇ ಹಿರಿಯರಂದಿದ್ದು – ತನ್ನ ತಾನರಿತವನೇ ಕಡು ಜಾಣ! ಅಲ್ಲಿಯವರೆಗೆ ಜಗತ್ತೆಲ್ಲಾ ಅಂಧಕಾರಮಯವಾಗಿರುತ್ತದೆ, ದುಯರ್ೋಧನನ ಮನಸ್ಥಿತಿಯೇ ಇರುತ್ತದೆ.

ನಮ್ಮ ಮನಸ್ಸಿನೊಳಗಿನ ಕಲ್ಮಶಗಳನ್ನು, ಗಾಢಾಂಧಕಾರಮಯ ಆಲೋಚನೆಗಳನ್ನು ತೊಲಗಿಸಲು ಜ್ಞಾನದ ಬೆಳಕು ನೀಡುವ ಹಣತೆ ಹಚ್ಚಬೇಕಾಗಿದೆ. ಈ ಗುರಿ ನಮ್ಮೆದುರಿಗಿದ್ದರೆ ಗುರು ತಾನಾಗಿಯೇ ದೊರೆಯುತ್ತಾನೆ, ಅದಕ್ಕಲ್ಲವೇ ಗುರುವನ್ನು ಹಾಡಿ ಹೊಗಳುವುದು… “ಅಜ್ಞಾನ ತಿಮಿರಾಂಧಸ್ಯ, ಜ್ಞಾನಾಂಜನ ಶಲಾಕಯಾ” ಅಂತ.

ಇಂದಿನ ಲೌಕಿಕ ಜಂಜಾಟದ ಜೀವನದಲ್ಲಿ ನಮ್ಮ ಸುತ್ತಮುತ್ತ ಇರುವವರೇ ನಮಗೆ ಗುರು. ಅವರಲ್ಲಿ ಉತ್ತಮರನ್ನು ಆಯ್ದುಕೊಳ್ಳುವುದು ಕೂಡ ನಮ್ಮ ಮನಸ್ಥಿತಿಯ ಮೇಲೆಯೇ ಅವಲಂಬಿತವಾಗಿದೆ. ಲೋಕವೇ ಕೆಟ್ಟಹುಳಗಳಿಂದ ತುಂಬಿದೆ ಎಂದಿರುವ ಕೌರವನ ಮನಸ್ಥಿತಿ ನಮ್ಮದಾದಲ್ಲಿ ಜೀವನದಲ್ಲಿ ಮುಂದೆ ಬರುವುದು ಸಾಧ್ಯವೇ ಇಲ್ಲ. ಮೊದಲು ತನ್ನನ್ನು ಅರಿತುಕೊಂಡು, ತಪ್ಪು ತಿದ್ದಿಕೊಂಡು, ಸುತ್ತಮುತ್ತಲಿದ್ದವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳದೆ ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಜೀವನದ ಹಾದಿ ತುಂಬಾ ಬೆಳಕು, ಬೆಳಕು, ಬೆಳಕು.

ದೀಪಾವಳಿಯಲ್ಲಿ ಸುಡುಮದ್ದು ಸುಡುವುದು ಮತ್ತು ಸಿಡಿ ಮದ್ದು ಸಿಡಿಸುವುದಕ್ಕೂ ತನ್ನದೇ ಆದ ಕಾರಣಗಳಿವೆ. ಮನದೊಳಗಿನ ಕೆಟ್ಟದ್ದನ್ನು ಸುಟ್ಟು ಬಿಡುವುದು, ಜಗತ್ತೆಂಬ ಮಾಯೆಯಲ್ಲಿ ಹರಡಿಕೊಂಡಿರುವ ದುಷ್ಟಶಕ್ತಿಗಳನ್ನು ಸದ್ದು ಮಾಡಿ ಓಡಿಸುವುದು ಇದರ ಹಿಂದಿರುವ ಮರ್ಮ. ಆಂಗ್ಲರ ನಾಲಿಗೆಯಲ್ಲಿ ದೀಪಾವಳಿಯು ಅಪಭ್ರಂಶಗೊಂಡು ‘ದಿವಾಳಿ’ ಎಂದೇ ಆಗಿದೆ. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಇಂದಿನ ದಿನಗಳಲ್ಲಿ ಆಂಗ್ಲರ ಈ ನಾಮಕರಣವನ್ನು ನಾವು ಒಪ್ಪಬಹುದಾಗಿದ್ದರೂ, ಹ್ಯಾಪಿ ದಿವಾಳಿ ಆಗೋದು ಬೇಡವೇ ಬೇಡ, “ದೀಪಾವಳಿ ಶುಭಾಶಯಗಳು” ಎಂದೇ ವಿನಿಮಯ ಮಾಡಿಕೊಳ್ಳೋಣ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English