ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 06-07 ಮಾರ್ಚ್ 2020 ರಂದು ದ.ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಶಿಕ್ಷಕರಿಗೆ ಗಣಿತ ಮತ್ತು ವಿಜ್ಞಾನ ಪಠ್ಯಕ್ರಮ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ದ. ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.
ಈ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶೋಭಾ ಗಣಿತ ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಜಿಲ್ಲಾ ಪಂಚಾಯತ್ ನೆರವೇರಿಸಿ ಇನ್ನು 20 ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುವುದರಿಂದ ಮಕ್ಕಳ ಸಂದೇಹಗಳನ್ನು ಪರಿಹರಿಸಿ ಅವರನ್ನು ಹೇಗೆ ಪರೀಕ್ಷೆಗೆ ತಯಾರಿಗೊಳಿಸಬೇಕೆಂದು ಯೋಜನೆರೂಪಿಸಿ ಉತ್ತಮ ಫಲಿತಾಂಶವನ್ನು ನೀಡಲು ಸಹಕರಿಸುವಂತೆ ಕರೆ ಕೊಟ್ಟರು.
ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ದ. ಕ. ಜಿಲ್ಲಾಧ್ಯಕ್ಷ ಶ್ರೀ ಸ್ಟ್ಯಾನಿ ತಾವ್ರೋ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಿವರಾಮ ಧನ್ಯವಾದ ಸಮರ್ಪಣೆಗೈದರು. ಶ್ರೀ ವಿಘ್ನೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ, ಶ್ರೀ ರೋಶನ್ ಡಿ’ಸೋಜ, ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀ ಸದಾಶಿವ ಪೂಜಾರಿ, ಶ್ರೀ ಸ್ಟ್ಯಾನಿ ತಾವ್ರೋ, ಹಾಗೂ ಶ್ರೀ ರಘುನಾಥ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.
ಎರಡು ದಿನಗಳ ಕಾರ್ಯಕ್ರಮದ ಕೊನೆಯಲ್ಲಿ ಭೇಟಿ ನೀಡಿದ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಶ್ರೀ ಮಲ್ಲೇಸ್ವಾಮಿಯವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಕರ ಶ್ರಮವನ್ನು ಶ್ಲಾಘಿಸಿ, ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಉತ್ತಮ ಫಲಿತಾಂಶಕ್ಕಾಗಿ ಪ್ರಯತ್ನಿಸುವಂತೆ ಕರೆ ಕೊಟ್ಟರು. ಜೊತೆಗೆ ಆಡಳಿತಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರಲು ತಿಳಿಸಿದರು. ನಂತರ ಕಾರ್ಯಕ್ರಮದ ಕುರಿತು ಅಧ್ಯಾಪಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾಗಿದ್ದು, ತಮ್ಮ ಸಂದೇಹಗಳನ್ನು ಪರಿಹರಿಸಲು ಸಹಕಾರಿಯಾಗಿವೆ ಎಂದು ಅಭಿಪ್ರಾಯ ಪಟ್ಟರು.
Click this button or press Ctrl+G to toggle between Kannada and English