ಮೈಸೂರು : ಕೊರೋನಾ ವೈರಸ್ ಆತಂಕದ ನಡುವೆಯೇ ಈಗ ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಎದುರಾಗಿದೆ. ನಗರದಲ್ಲಿ ಕಳೆದೊಂದು ವಾರದಿಂದ ಒಟ್ಟು 12 ಕೊಕ್ಕರೆಗಳು ಸಾವನ್ನಪ್ಪಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಯಾಕೆಂದರೆ ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಈ ಕೊಕ್ಕರೆಗಳ ಸಾವು ಮೈಸೂರಿಗರಲ್ಲಿ ತಲ್ಲಣ ಉಂಟು ಮಾಡಿದೆ. ವಾರ್ಡ್ ಸಂಖ್ಯೆ 55ರ ವ್ಯಾಪ್ತಿಯಲ್ಲೇ 12 ಕೊಕ್ಕರೆಗಳು ಅಸುನೀಗಿವೆ. ಹಕ್ಕಿ ಜ್ವರದಿಂದಲೇ ಕೊಕ್ಕರೆಗಳು ಮೃತಪಟ್ಟಿರಬಹುದು ಎಂಬ ಶಂಕೆ ಮೂಡಿದೆ. ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ರಾಮಪ್ರಸಾದ್ ಅವರು ಮಹಾನಗರ ಪಾಲಿಕೆಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಡಾ. ನಾಗರಾಜ್ ಸ್ಥಳಕ್ಕಾಗಮಿಸಿ ಅವರು ಕೂಡ ಪರಿಶೀಲನೆ ನಡೆಸಿದ್ದಾರೆ.
ಮೃತ ಕೊಕ್ಕರೆಗಳ ದೇಹದ ತುಣುಕುಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಕೊಕ್ಕರೆಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವಿರಬಹುದು ಎಂದು ವಾರ್ಡ್ ನಂಬರ್ 55 ರ ಪಾಲಿಕೆ ಸದಸ್ಯ ಮಾ. ವಿ. ರಾಮಪ್ರಸಾದ್ ಶಂಕೆ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English