ಬೆಂಗಳೂರು : ನಗರದ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವನ್ನಪ್ಪಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ರಾಜೇಶ್ ಆರ್. (34) ಮೃತ ಮಾವುತ. ಆರ್ಟ್ ಆಫ್ ಲಿವಿಂಗ್ಆಶ್ರಮದಲ್ಲಿ ಕಳೆದ 12 ವರ್ಷಗಳಿಂದ ಮಹೇಶ್ವರ ಹೆಸರಿನ ಆನೆಯನ್ನು ಸಾಕಲಾಗಿತ್ತು. ರಾಜೇಶ್ ಕಳೆದ ಮೂರು ವರ್ಷಗಳಿಂದ ಈ ಆನೆಯನ್ನು ನೋಡಿಕೊಳ್ಳುತ್ತಿದ್ದರು.
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜೇಶ್ ಆನೆ ಕಟ್ಟುವ ಸ್ಥಳವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಮಯದಲ್ಲಿ ಅವರು ಆನೆಯ ತುಳಿತಕ್ಕೆ ಒಳಗಾಗಿದ್ದಾರೆ. ಈ ವೇಳೆ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಶ್ರಮದವರು ಮಾಹಿತಿ ನೀಡಿದ್ದಾರೆ.
ಕೂಡಲೇ ಕಗ್ಗಲೀಪುರ ಅರಣ್ಯಾಧಿಕಾರಿಗಳಿಗೆ ಆಶ್ರಮದ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಆಶ್ರಮಕ್ಕೆ ಭೇಟಿ ಕೊಟ್ಟು ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರಾಜೇಶ್ ಅವರನ್ನು ಆನೆ ತುಳಿದಿದ್ದೇಕೆ ಎನ್ನುವ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ.
Click this button or press Ctrl+G to toggle between Kannada and English