ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

4:24 PM, Wednesday, March 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

BJP

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ತ್ಯಜಿಸಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ನವದೆಹಲಿಯ ಪಕ್ಷದ ಪ್ರದಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಶಾಲು ಹೊದಿಸಿ ಸಿಂಧಿಯಾ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಪರಿವಾರ ಸೇರುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದರು. ಸಿಂಧಿಯಾ ಅವರ ಅಜ್ಜಿ ರಾಜಮಾತಾ ಸಿಂಧಿಯಾ ಜನಸಂಘ ಹಾಗೂ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಅವರ ಮೊಮ್ಮಗ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ಪಕ್ಷ ವಾಸ್ತವಿಕತೆನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೇ ಇರುವುದು ತಮಗೆ ಬಹಳ ನೋವುಂಟು ಮಾಡಿದೆ ಎಂದು ಹೇಳಿದರು.

ವಾಸ್ತವಿಕತೆಯಿಂದ ದೂರವೇ ಇರುವ ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಯಾವ ನಾಯಕರ ಮಾತಿಗೂ ಬೆಲೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದಿಂದ ಬೇಸತ್ತು ಕಾಂಗ್ರೆಸ್ ತೊರೆದಿರುವುದಾಗಿ ಸಿಂಧಿಯಾ ಸ್ಪಷ್ಟಪಡಿಸಿದರು.

ಅಲ್ಲದೇ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ರಾಜ್ಯದ ರೈತ ಹಾಗೂ ಯುವ ಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಮರೆತಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಿಂಧಿಯಾ ಅರೋಪಿಸಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದ್ದು, ದೇಶಕ್ಕೆ ಉಜ್ವಲ ಭವಿಷ್ಯವಿರುವುದನ್ನು ಮನಗಂಡು ಬಿಜೆಪಿ ಸೇರುತ್ತಿರುವುದಾಗಿ ಸಿಂಧಿಯಾ ಸ್ಪಷ್ಟಪಡಿಸಿದರು.

ಇಂದು ಭಾರತದ ಹೆಸರು ಇಡೀ ವಿಶ್ವದಾದ್ಯಂತ ಮೊಳಗಲು ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯೇ ಕಾರಣ ಎಂದು ಹೊಗಳಿದ ಸಿಂಧಿಯಾ, ಬಿಜೆಪಿ ಸೇರಲು ಆಮಂತ್ರಣ ನೀಡಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಅಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ಎಂದು ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English