ಮಂಗಳೂರು ಹನಿಟ್ಯ್ರಾಪ್‌ : 8 ಮಂದಿಯ ಆರೋಪ ಸಾಬೀತು

4:09 PM, Thursday, March 12th, 2020
Share
1 Star2 Stars3 Stars4 Stars5 Stars
(No Ratings Yet)
Loading...

Honey trapಮಂಗಳೂರು :  ನಗರದ ಬಳ್ಳಾಲ್‌ಬಾಗ್‌ನ ಪ್ಲ್ಯಾಟ್‌ ಒಂದರಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರನ್ನು ಹನಿಟ್ಯ್ರಾಪ್‌ ಮೂಲಕ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ದೋಚಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಯುವತಿಯರು ಸಹಿತ 8 ಮಂದಿಯ ಮೇಲಿದ್ದ ಆರೋಪವು ಮಂಗಳೂರಿನ ನಾಲ್ಕನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 6,000 ರೂಪಾಯಿ ದಂಡ ವಿಧಿಸಲಾಗಿದೆ.

ಕೊಣಾಜೆಯ ಶಿಲ್ಪಾ (27), ಎಲ್ಯಾರ್‌ಪದವಿನ ಅವಿನಾಶ್‌ (25), ಕುತ್ತರಾ‌ ಪದವಿನ ರಂಜಿತ್‌(23) ಹಾಗೂ ಯತೀಶ್‌ (26), ದೇರಳಕಟ್ಟೆಯ ನಿತಿನ್‌ (23), ಕೊಣಾಜೆಯ ಶ್ರೀಜಿತ್‌ (24), ಬೋಂದೆಲ್‌ನ ಸಚಿನ್‌ (23), ಕೋಟೆಕಾರ್‌ ಬೀರಿಯ ತೃಪ್ತಿ (25) ಶಿಕ್ಷೆಗೊಳಗಾದ ಆರೋಪಿಗಳು.

2018 ರ ಸೆಪ್ಟೆಂಬರ್‌ 18 ರಂದು ಮಧ್ಯಾಹ್ನ ನಗರದ ಬಳ್ಳಾಲ್‌ಬಾಗ್‌ನ ಶ್ರೀದೇವಿ ಕಾಲೇಜು ರಸ್ತೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಾಗಿದ್ದ 57 ವರ್ಷದ ಬ್ಯಾಂಕ್‌ ಮ್ಯಾನೇಜರ್‌ (ಪ್ರಸ್ತುತ ನಿವೃತ್ತರು) ಅವರಿಂದ ಬ್ಯಾಂಕಿಂಗ್‌ ಪರೀಕ್ಷೆಯ ತರಬೇತಿ ಪಡೆಯುವ ನೆಪದಲ್ಲಿ ಅವರನ್ನು ಹನಿಟ್ಯ್ರಾಪ್‌ ಮೂಲಕ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ದೋಚುವ ಬಗ್ಗೆ ಅದೇ ಪ್ಲ್ಯಾಟ್‌ನಲ್ಲಿ ವಾಸವಾಗಿದ್ದ ಆಟೋಪಿ ಶಿಲ್ಪಾ ಸಂಚು ಮಾಡಿದ್ದಳು.

ಅದರಂತೆ ಆರೋಪಿ ಶಿಲ್ಪಾಳನ್ನು ಬ್ಯಾಂಕ್‌ ಮ್ಯಾನೇಜರ್‌ ಬಳಿ ಕಳುಹಿಸಿ ಅವರ ಜೊತೆಗೆ ನಿಂತಿದ್ದ ಭಂಗಿಯ ಪೋಟೋ ತೆಗೆದು ಹಾಗೂ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೇಳಿ ಚೂರಿ ತೋರಿಸಿ ಬೆದರಿಕೆ ಹಾಕಿ 1 ಲಕ್ಷ ರೂಪಾಯಿ ಹಣ ನೀಡುವಂತೆ ಹೇಳಿದ್ದರು. ಬ್ಯಾಂಕ್‌ ಮ್ಯಾನೇಜರ್‌ 90,000 ರೂಪಾಯಿ ನೀಡುವುದಾಗಿ ಒಪ್ಪಿದ್ದರು. ಆ ಬಳಿಕ ಆರೋಪಿಗಳು ಅವರ ಬ್ಯಾಂಕ್‌ ಚೆಕ್‌ನ ಎರಡು ಖಾಲಿ ಹಾಳೆಗಳಿಗೆ ಬಲವಂತವಾಗಿ ಸಹಿ ಹಾಕಿಸಿ, ಪುತ್ರನ ದ್ವಿಚಕ್ರ ವಾಹನದ ಆರ್‌ಸಿ ತೆಗೆದುಕೊಂಡು ಹಣ ನೀಡದಿದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪ ಮಾಡಲಾಗಿತ್ತು.

ಮ್ಯಾನೇಜರ್‌ ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಠಾಣೆಯ ಇನ್‌ಸ್ಪೆಕ್ಟರ್‌ ಕೆ. ರಾಜೇಶ್‌ ಪ್ರಕರಣ ದಾಖಲು ಮಾಡಿದ್ದರು. ಘಟನೆ ನಡೆದ ಆರು ದಿನಗಳ ಬಳಿಕ ಆರೋಪಿಗಳನ್ನು ಬರ್ಕೆ ಹಾಗೂ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದರು. ನಂತರ ಇನ್‌ಸ್ಪೆಕ್ಟರ್‌ ಕೆ.ಕೆ.ರಾಮಕೃಷ್ಣ ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಗಳನ್ನು ಕೈಗೆತ್ತಿಕೊಂಡ 4 ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ.

ಹನಿಟ್ಯ್ರಾಪ್‌ ಮೂಲಕ ಬ್ಲ್ಯಾಕ್‌ ಮೇಲ್‌ ಮಾಡಲು ಸಂಚು ರೂಪಿಸಿದ ಆರೋಪಕ್ಕೆ 3 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 2,000 ರೂಪಾಯಿ ದಂಡ, ದರೋಡೆ ಯತ್ನಕ್ಕೆ 3 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 2,000 ರೂಪಾಯಿ ದಂಡ, ಮನೆಗ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪಕ್ಕೆ ತಲಾ 1,000 ರೂಪಾಯಿ ದಂಡ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ 6 ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ, 1,000 ರೂಪಾಯಿ ದಂಡ ವಿಧಿಸಲಾಗಿದೆ.

ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರ ಉದಿಯಾವರ್‌ ವಾದ ಮಂಡಿಸಿದ್ದರು.

ಹನಿಟ್ಯ್ರಾಪ್‌ ಘಟನೆಗಳ ಬಗ್ಗೆ ಮರ್ಯಾದೆಗೆ ಅಂಜಿ ದೂರು ನೀಡುವವರ ಸಂಖ್ಯೆ ಕಡಿಮೆ. ಈ ಪ್ರಕರಣದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಧೈರ್ಯವಾಗಿ ದೂರು ನೀಡಿದ್ದಾರೆ. ಇದು ಹನಿಟ್ಯ್ರಾಪ್‌ ಸಂಬಂಧಿತ ಮಂಗಳೂರಿನ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಮೊದಲ ಪ್ರಕರಣವಾಗಿದೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರ ಉದಿಯಾವರ್‌ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English