ಒಟ್ಟಾವ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಬಗ್ಗೆ ಕೆನಡಾದ ಪ್ರಧಾನಿ ಕಾರ್ಯಾಲಯ ಪ್ರಕಟಣೆ ಹೊರಡಿಸಿ ಸ್ಪಷ್ಟಪಡಿಸಿದೆ.
ಸೋಫಿ ಗ್ರೆಗೊಯಿರ್ ಅವರ ದೇಹದಲ್ಲಿ ಜ್ವರ ತರಹದ ರೋಗಲಕ್ಷಣ ಕಾಣಿಸಿಕೊಂಡದ್ದರಿಂದ ಪರೀಕ್ಷೆಗೆ ಒಳಪಡಿಲಾಯ್ತು. ಈ ವೇಳೆ ಧನಾತ್ಮಕ ಫಲಿತಾಂಶ ಬಂದಿದೆ. ವೈದ್ಯಕೀಯ ಸಲಹೆಗಳನ್ನು ಅನುಸರಿಸಿ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಬುಧವಾರ ಬ್ರಿಟನ್‌ನಿಂದ ಹಿಂತಿರುಗಿದ ಸೋಫಿ ಗ್ರೆಗೊಯಿರ್ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಕೊರೊನಾ ತರಹದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ತಾನು ಪರೀಕ್ಷೆಗೆ ಒಳಗಾಗುತ್ತೇನೆ ಎಂದು ಅವರೇ ಹೇಳಿಕೊಂಡಿದ್ದರು. 14 ದಿನಗಳ ಕಾಲ ಸ್ವಯಂ-ನಿರ್ಬಂಧ , ಪ್ರತ್ಯೇಕತೆ ಹೊಂದಿ ಬೇರೆ ಆಗಿ ಇರುವುದಾಗಿ ಹೇಳಿಕೊಂಡಿದ್ದರು.
ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಗ್ಯದಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿದ್ದು, ವೈದ್ಯರ ಸಲಹೆಯನ್ನು ಅನುಸರಿಸಿ ಅವರ ಮೇಲೆ ಕೂಡ ಪ್ರತ್ಯೇಕ ನಿಗಾ ಇರಿಸಿ ಮುನ್ನೆಚ್ಚರಿಕೆವಹಿಸಲಾಗಿದೆ. ಮನೆಯಿಂದಲೇ ತಾನು ಕೆಲಸ ಮಾಡುವುದಾಗಿ ಹೇಳಿರುವ ಪ್ರಧಾನಿ ಇಂದು ಕೆನಡಾದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಫಿ ಗ್ರೆಗೊಯಿರ್ ಕೊರೊನಾ ಪೀಡಿತೆ ಆಗಿರುವುದರಿಂದ ಮೂವರು ಮಕ್ಕಳ ಮೇಲೆ ಕೂಡ ನಿಗಾ ಇಡಲಾಗಿದೆ.
ದೇಶದಲ್ಲಿ ಕೊರೊನ ಹೆಚ್ಚುತ್ತಿರುವುದಿಂದ ಒಟ್ಟಾವಾದಲ್ಲಿ ಕೆನಡಾದ ಪ್ರಾಂತೀಯ ಮತ್ತು ಪ್ರಾದೇಶಿಕ ನಾಯಕರೊಂದಿಗೆ ನಿರ್ಧರಿಸಲಾಗಿದ್ದ ಸಭೆಯನ್ನು ಪ್ರಧಾನಿ ಟ್ರುಡೊ ರದ್ದುಗೊಳಿಸಿದ್ದಾರೆ. ವರದಿ ಪ್ರಕಾರ ಕೆನಾಡದಲ್ಲಿ 140ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಓಬ್ಬರನ್ನು ಬಲಿ ಪಡೆದಿದೆ. 11 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
Click this button or press Ctrl+G to toggle between Kannada and English