ಮಂಗಳೂರು : ಬಿಜೈ ಕಾಪಿಕಾಡ್ ನ ಚಿಣ್ಣರ ತಂಗುದಾಣದಲ್ಲಿ ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ ಹಾಗೂ ಚೈಲ್ಡ್ ಲೈನ್ ಮಂಗಳೂರು ಇವರ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಮತ್ತು ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ 2012 ಕ್ಕೆ ಬುಧವಾರ ದ.ಕ.ಜಿ.ಪಂ.ಉಪಾಧ್ಯಕ್ಷ ರಿತೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾವು ವರ್ಷದಲ್ಲಿ ಒಂದು ದಿನ ಈ ರೀತಿಯ ಆಚರಣೆಯನ್ನು ಆಚರಿಸಿದರೆ ಸಾಲದು, ನಮ್ಮ ಸಮಾಜದಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣ ಸಿಗಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಕೈಗೊಂಡ ಕಾರ್ಯಗಳು ಮಕ್ಕಳಿಗೆ ತಲುಪಬೇಕಾದರೆ, ಇಂತಹ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ನಾವು ಆ ಯೋಜನೆಗಳ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು. ಅಲ್ಲದೆ ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ಕಡಿಮೆಯಾಗಿದ್ದರೂ ವಲಸೆ ಕಾರ್ಮಿಕರು ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುತ್ತಿರುವುದು ಕಳವಳಕಾರಿ ವಿಚಾರ ಎಂದರು.
ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶಕಿ ಆಶಾನಾಯಕ್ ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅದಕ್ಕಿಂದು ಚ್ಯುತಿ ಬರುತ್ತಿದೆ. ಹಾಗಾಗಿ ಸರಕಾರ 2010ರಲ್ಲಿ ಮಾಡಿರುವ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ದೇಶದಾದ್ಯಂತ ಪ್ರಚಾರ ಪಡಿಸಿ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಆಗ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ತಜ್ಞ ಕೃಷ್ಣ ಶಾಸ್ತ್ರಿ ಬಾಳಿಲ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರವೇ ಆದೇಶ ನೀಡಿದೆ. ಸರಕಾರಿ ಶಾಲೆ ದುಸ್ಥಿತಿಗೆ ಇಂಗ್ಲಿಷ್ ವ್ಯಾವೋಹ ಮಾತ್ರ ಕಾರಣವಲ್ಲ. ಶಿಕ್ಷಣ ಇಲಾಖೆಯೂ ಕಾರಣವಾಗಿದೆ. ಹಲವಾರು ಯೋಜನೆಗಳ ಮೂಲಕ ಕೋಟ್ಯಂತರ ಅನುದಾನ ಬಂದರೂ ಸರಕಾರಿ ಶಾಲೆಗಳು ಅಭಿವೃದ್ಧಿ ಕಂಡಿಲ್ಲ ಎಂದು ಅವರು ಹೇಳಿದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೊಸೆಸ್ ಜಯಶೇಖರ್, ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಸರ್ವ ಶಿಕ್ಷಣ ಅಭಿಯಾನ ಯೋಜನಾಧಿಕಾರಿ ಶಿವ ಪ್ರಕಾಶ್, ಕಾರ್ಯಕ್ರಮ ಸಂಚಾಲಕ ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಶಿಕ್ಷಣ ಸಂಪನ್ಮೂಲ ಒಕ್ಕೂಟದ ಸುಕೇಶ್ ಶೆಟ್ಟಿ, ವಾರ್ತಾ ಇಲಾಖೆಯ ಉಪನಿರ್ದೇಶಕಿ ರೋಹಿಣಿ, ಕೃಷ್ಣ ಶಾಸ್ತ್ರಿ ಬಾಳಿಲ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English