ನವದೆಹಲಿ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್ ಬ್ಯಾಂಕ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಬ್ಯಾಂಕ್ ಎಲ್ಲ ಶಾಖೆಗಳು ಮತ್ತು ಎಟಿಎಂಗಳು ತೆರೆಯಲಿವೆ. ಬ್ಯಾಂಕ್ ಮೇಲೆ ಆರ್ಬಿಐ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲಿದೆ.
ಬ್ಯಾಂಕಿನ ಎಲ್ಲ ಸೇವೆಗಳು ಇಂದು ಸಂಜೆ 6ರಿಂದ ಆರಂಭವಾಗಲಿವೆ. ಮಾರ್ಚ್ 19ರಿಂದ ನಮ್ಮ 1,132 ಶಾಖೆಗಳಲ್ಲಿ ಯಾವುದೇ ಶಾಖೆಗೆ ಭೇಟಿ ನೀಡಿ, ಸೇವೆ ಪಡೆಯಿರಿ. ನಮ್ಮ ಎಲ್ಲ ಡಿಜಿಟಲ್ ಸೇವೆಗಳು ಹಾಗೂ ಪ್ಲಾಟ್ಫಾರ್ಮ್ಗಳೂ ಸೇವೆಗೆ ತೆರೆದುಕೊಳ್ಳಲಿವೆ ಎಂದು ಯೆಸ್ ಬ್ಯಾಂಕ್ ಸಿಇಒ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಯೋಜನೆಯಂತೆ ಶೇ.49ರಷ್ಟು ಷೇರು ಖರೀದಿಸಲಿರುವ ಎಸ್ಬಿಐ ಮೂರು ವರ್ಷಗಳವರೆಗೆ ಷೇರುಪಾಲನ್ನು ಶೇ.26ಕ್ಕಿಂತಲೂ ಕೆಳಗೆ ಇಳಿಸುವಂತಿಲ್ಲ. ಇತರೆ ಹೂಡಿಕೆದಾರರು ಮತ್ತು ಹಾಲಿ ಷೇರುದಾರರು ಬ್ಯಾಂಕ್ನಲ್ಲಿ ಶೇ.75ರಷ್ಟು ಷೇರುಪಾಲನ್ನು ಮೂರು ವರ್ಷಗಳ ಅವಧಿಗೆ (ಲಾಕ್ ಇನ್ ಪರಿಯಡ್) ತೆಗೆಯುವಂತಿಲ್ಲ. 100ಕ್ಕಿಂತಲೂ ಕಡಿಮೆ ಷೇರು ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.
ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಬ್ಯಾಂಕ್ ವಹಿವಾಟನ್ನು ಆರ್ಬಿಐ ಮುಟ್ಟುಗೊಲು ಹಾಕಿಕೊಂಡು ಸೂಪರ್ಸಿಡ್ ಮಾಡಿತ್ತು. ಈ ವೇಳೆ ಸಹಾಯಕ್ಕೆ ಬಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಯೆಸ್ ಬ್ಯಾಂಕ್ನ ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್ ಬ್ಯಾಂಕ್ ಷೇರು ಮೌಲ್ಯ ಶೇ. 58 ಏರಿಕೆಯಾಗಿ ಚೇತರಿಕೆ ಕಂಡಿತ್ತು. ಬ್ಯಾಂಕ್ ಚೇತರಿಕೆಗೆ ಆರ್ಬಿಐ ಬ್ಯಾಂಕ್ ಪುನಶ್ಚೇತನ ಕರಡು ನೀತಿಯನ್ನು ಜಾರಿಗೆ ತಂದಿತ್ತು. ಇದೀಗ ಬ್ಯಾಂಕ್ ಅಲ್ಪಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಇಂದಿನಿಂದ ವಹಿವಾಟು ಆರಂಭಿಸಲಿದೆ.
Click this button or press Ctrl+G to toggle between Kannada and English