ಮಂಗಳೂರು : ಜನರಿಗೆ ದಿನಸಿಗಳನ್ನು ಪಡೆಯುವ ಗೊಂದಲಗಳು ಒಂದೆಡೆಯಾದರೆ, ಜಿಲ್ಲಾಡಳಿತ ಮತ್ತು ಸಂಸದರು, ಶಾಸಕರು, ಪೊಲೀಸರು ನೀಡುವ ಬೇರೆ ಬೇರೆ ಹೇಳಿಕೆಗಳು ಜನಸಾಮನ್ಯರಿಗೆ ಕೊರೋನಾ ವೈರಸ್ ಗಿಂತ ದೊಡ್ಡ ತಲೆನೋವಾಗಿದೆ.
ಬುಧವಾರ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಕ್ಕಿ, ತರಕಾರಿ, ಹಣ್ಣುಹಂಪಲು ಮತ್ತು ಆಹಾರ ಸಾಮಾಗ್ರಿಗಳ ಪೂರೈಕೆ ನಿರಂತರವಾಗಿರಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಬೆಳಿಗ್ಗೆ ಆರರಿಂದ ಮಧ್ಯಾಹ್ನ ಹನ್ನೆರಡರವರೆಗೆ ಅಂಗಡಿಗಳು ತೆರೆದಿರುತ್ತದೆ ಎಂದಿದ್ದಾರೆ. ಜನ ಭಯಪಡುವ ಅಗತ್ಯವಿಲ್ಲ ಆಹಾರ ಇಲಾಖೆ ಸಾಮಗ್ರಿಗಳನ್ನು ಸಾಕಷ್ಟು ದಾಸ್ತಾನ ಮಾಡಿ ಇಟ್ಟುಕೊಂಡಿದೆ ಎಂದೂ ಹೇಳಿದ್ದಾರೆ.
ಅದಾದ ಸ್ವಲ್ಪ ಹೊತ್ತಿನಲ್ಲೇ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಚ್ 26 ರಿಂದ ಮಂಗಳೂರು ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತದೆ ಯಾರೂ ಮನೆಯಿಂದ ಹೊರಗೆ ಬರುವ ಹಾಗಿಲ್ಲ, ನಿಮ್ಮ ಮನೆಬಾಗಿಲಿಗೆ ಆಹಾರಸಾಮಗ್ರಿಗಳನ್ನು ತಂದು ಕೊಡುತ್ತೇವೆ ಎಂದಿದ್ದಾರೆ.
ದಿನಸಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್ ಗಳು ರಾಜ್ಯದಾದ್ಯಂತ 24 * 7 ತೆರೆದಿರಬಹುದು ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಇಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಅದಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರು ಸಂಸದರನ್ನೂ ಒಳಗೊಂಡಂತೆ ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರನ್ನು ಕರೆದು ಮಂಗಳೂರು ಕೇಂದ್ರ ಮಾರುಕಟ್ಟೆ ಬೆಳಿಗ್ಗೆ 6 ರಿಂದ 10ರ ವರೆಗೆ ಚಿಲ್ಲರೆ ವ್ಯಾಪಾರಿಗಳಿಗೆ ತೆರೆದಿರುತ್ತದೆ ಆ ಸಮಯದಲ್ಲಿ ಸಾರ್ವಜನಿಕರು ಬರುವಂತಿಲ್ಲ ಎಂದಿದ್ದಾರೆ. ಸಾರ್ವಜನಿಕರಿಗೆ ಅವರವರ ಏರಿಯಾಗಳ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ 12ರ ವರೆಗೆ ತೆರೆಯಲು ಸೂಚಿಸಲಾಗಿದೆ ಎಂದಿದ್ದಾರೆ.
ಪೊಲೀಸ್ ಕಮಿಷನರ್ ಕಛೇರಿಯಿಂದಲೂ ಕೇಂದ್ರ ಮಾರುಕಟ್ಟೆ ಬೆಳಿಗ್ಗೆ 6 ರಿಂದ 10ರ ವರೆಗೆ ರಖಂ ವ್ಯಾಪಾರಿಗಳಿಗೆ ತೆರೆದಿರುತ್ತದೆ. ಸಾರ್ವಜನಿಕರಿಗೆ ಅವರವರ ಏರಿಯಾಗಳ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ 12ರ ವರೆಗೆ ತೆರೆಯಲು ಸೂಚಿಸಲಾಗಿದೆ ಎಂದಿದ್ದಾರೆ.
ಕೊನೆಗೆ ಇದ್ಯಾವುದೂ ತಿಳಿಯದೆ ಇಂದಿನಂತೆ ನಾಳೆಯೂ ಮನಪಾ ಅಧಿಕಾರಿಗಳು, ಅಸಿಸ್ಟೆಂಟ್ ಕಮಿಷನರ್ ಬಂದು ಜನರನ್ನು ಓಡಿಸಬಹುದು.
ಒಟ್ಟಿನಲ್ಲಿ ಕೊರೋನಾ ಹತೋಟಿಗೆ ಎಲ್ಲರ ಸಹಕಾರವೂ ಅಗತ್ಯ. ಜನಸಾಮಾನ್ಯರು, ಮಧ್ಯವರ್ಗದ ಉದ್ಯಮ, ದಿನಗೂಲಿಗಳು ಮಾರುಕಟ್ಟೆಗೆ ಬರುವುದು ತಮ್ಮ ಕುಟುಂಬಕ್ಕೆ ಒಂದು ಹೊತ್ತಿನ ಊಟದ ದಿನಸಿಗಳಿಗೆ ಎಂದು ಅಧಿಕಾರಿಗಳಿಗೆ ತಿಳುವಳಿಕೆ ಇರಬೇಕಾದುದು ಅಗತ್ಯ.
Click this button or press Ctrl+G to toggle between Kannada and English