ಮಂಗಳೂರು : ಕೊರೊನಾ ಸೋಂಕು ಹರಡದಂತೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಇದೀಗ 1.70 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಸ್ಪಂದನೆ ನೀಡಿದೆ. ಸೋಂಕು ನಿವಾರಣೆ ಹೋರಾಟದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರಿಗೆ ತಲಾ ೫೦ ಲಕ್ಷ ರೂ. ಮೌಲ್ಯದ ಮೆಡಿಕಲ್ ಇನ್ಸೂರೆನ್ಸ್ ಒದಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಿದೆ. ಉಜ್ವಲ ಸ್ಕೀಂ ಮೂಲಕ ೮.೩ ಕೋಟಿ ಬಿಪಿಎಲ್ ಕುಟುಂಬಗಳಿಗೆ ಮೂರು ತಿಂಗಳು ಉಚಿತ ಸಿಲಿಂಡರ್ ಲಭ್ಯವಾಗಲಿದ್ದು, ಬಡ ಮಹಿಳೆಯರಿಗೆ ವರದಾನವಾಗಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ೮೦ ಕೋಟಿ ಬಡವರು ಸೌಲಭ್ಯ ಪಡೆಯಲಿದ್ದಾರೆ. ನೇರ ನಗದು ವರ್ಗಾವಣೆ ಮೂಲಕ ೮.೬೯ ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರದಲ್ಲಿ ೨ ಸಾವಿರ ರೂ. ಕಂತು ಪಾವತಿಯಾಗಲಿದ್ದು ರಾಜ್ಯದ ಸಾವಿರಾರು ರೈತರು ಈ ಸೌಲಭ್ಯ ಪಡೆಯಲಿದ್ದಾರೆ. ಜನತೆ ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗದೆ ಲಾಕ್‌ಡೌನ್ ಯಶಸ್ವಿಗೆ ಸಹಕರಿಸಬೇಕೆಂದು ಸಂಸದರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Click this button or press Ctrl+G to toggle between Kannada and English