ನವದೆಹಲಿ : ದೇಶ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಅನ್ನು ನಿಯಂತ್ರಿಸುವ ಮತ್ತು ಸೋಂಕು ಬಾದಿತ ಜನರಿಗೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.
ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ 1.7 ಲಕ್ಷ ಕೋಟಿ ರೂ ಪ್ಯಾಕೇಜ್ ಸಿದ್ಧವಿದ್ದು, ಯಾರೂ ಸಹ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ ಪ್ಯಾಕೇಜ್ ವಿವರ ಇಂತಿದೆ
ಮುಂದಿನ 3 ತಿಂಗಳವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಜಾರಿಯಲ್ಲಿರಲಿದ್ದು, ಇದರ ಅಡಿಯಲ್ಲಿ 80 ಕೋಟಿ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ 5 ಕೆ.ಜಿ ಅಕ್ಕಿ ಅಥವಾ ಗೋದಿಯ ಜತೆಗೆ 5ಕೆ.ಜಿ. ಅಕ್ಕಿ ಅಥವಾ ಗೋದಿಯಂತಹ ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ (ಪ್ರಾಂತ್ಯಗಳಿಗೆ ಅನುಗುಣವಾಗಿ) ಸಿಗಲಿದೆ.
ಮಹಿಳಾ ಜನ ಧನ್ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ 500 ಪಡೆಯಲಿದ್ದಾರೆ. ಇದು ಮುಂದಿನ 3 ತಿಂಗಳ ವರೆಗೂ ಮುಂದುವರಿಯಲಿದೆ.
ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್ ಗಳು ಉಚಿತವಾಗಿ ಪೂರೈಕೆಯಾಗಲಿದೆ. ಇದರಿಂದಾಗಿ 8 ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದೇಶದ ಸುಮಾರು 8.6 ಕೋಟಿ ರೈತರು ಏಪ್ರಿಲ್ ಮೊದಲ ವಾರದಲ್ಲಿ 2,000 ಹಣವನ್ನು ನೇರ ವರ್ಗಾವಣೆ ಅಡಿಯಲ್ಲಿ ಪಡೆಯಲಿದ್ದಾರೆ.
ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ ಘೋಷಣೆ ಮಾಡಲಾಗಿದೆ.
ಹಿರಿಯ ನಾಗರಿಕರು, ವಿಧವೆ, ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ ರೂ1,000 ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ.
ನರೇಗಾ ವೇತನ ದಿನವೊಂದಕ್ಕೆ 182 ರೂ.ಗಳಿಂದ 202 ರೂ.ಗಳಿಗೆ ಏರಿಕೆ, 5 ಕೋಟಿ ಕುಟುಂಬಗಳು ಫಲಾನುಭವಿಗಳು
100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂ ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್ ಕೊಡುಗೆ.
ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗುತ್ತದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ 75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ 75ರಷ್ಟು ಮುಂಗಡ ಮೊತ್ತ; ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
Click this button or press Ctrl+G to toggle between Kannada and English