ನವದೆಹಲಿ : ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ಆರ್ ಬಿಐ ರಿಯಾಯ್ತಿ ನೀಡಿದ್ದು ಇದೀಗ ಬಹುತೇಕ ಬ್ಯಾಂಕ್ ಗಳು ಗ್ರಾಹಕರಿಗೆ, ಸಾಲಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ ಬಿಐ ಸೂಚನೆಯಂತೆ ರಿಯಾಯ್ತಿ ಘೋಷಿಸಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಅಫ್ ಕಾಮರ್ಸ್. ಇಂಡಿಯನ್ ಬ್ಯಾಂಕ್ ಪ್ರತ್ಯೇಕವಾಗಿ ಟ್ವೀಟ್ ಮಾಡುವ ಮೂಲಕ ಗ್ರಾಹಕರು ಮಾರ್ಚ್ 1ರಿಂದ ಮೇ 31ರವರೆಗೆ ಸಾಲದ ಕಂತನ್ನು ಪಾವತಿಸಲು ಆರ್ ಬಿಐ ಸೂಚನೆಯಂತೆ ರಿಯಾಯ್ತಿ ನೀಡಿರುವುದಾಗಿ ಸ್ಪಷ್ಟಪಡಿಸಿದೆ.
ಈ ಮೊದಲು ಆರ್ ಬಿಐ ಘೋಷಿಸಿದ್ದ ಮೂರು ತಿಂಗಳ ಇಎಂಐ ರಿಯಾಯ್ತಿ ಕುರಿತಂತೆ ಗ್ರಾಹಕರಲ್ಲಿ ಗೊಂದಲ ಮೂಡಿಸಿದ್ದು, ಇದೀಗ ಬ್ಯಾಂಕ್ ಗಳ ಸೂಚನೆಯಿಂದ ನಿರಾಳರಾದಂತಾಗಿದೆ. ಕ್ರೆಡಿಟ್ ಕಾರ್ಡ್ ಹೊರತುಪಡಿಸಿ ಎಲ್ಲಾ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ ಎಂದು ಆರ್ ಬಿಐ ತಿಳಿಸಿತ್ತು.
ಕೋವಿಡ್ 19 ವೈರಸ್ ಹರಡುವಿಕೆಯಿಂದ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಚೇತರಿಕೆ ನೀಡುವ ನಿಟ್ಟಿನಲ್ಲಿ ಆರ್ ಬಿಐ ರೆಪೋ ದರವನ್ನು ಕಡಿತಗೊಳಿಸಿತ್ತು. ಅಲ್ಲದೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಬಡವರಿಗೆ, ರೈತರಿಗೆ ಆರ್ಥಿಕ ನೆರವನ್ನು ಘೋಷಿಸಿದ್ದರು.
Click this button or press Ctrl+G to toggle between Kannada and English