ಮಂಗಳೂರು : ಹಗಲು ಹೊತ್ತಿನಲ್ಲಿ ಕೊರೋನಾ ವೈರಸ್ ಹರಡುವಿಕೆಯ ನಿಯಮ ಪಾಲಿಸದೇ, ಅಂತರ ಕಾಯ್ದುಕೊಳ್ಳದೆ ಜನರು ವ್ಯವಹರಿಸುವುದರಿಂದ. ಎ.1ರಿಂದ ಸೆಂಟ್ರಲ್ ಮಾರ್ಕೆಟ್ ಬಳಕೆಗೆ ಹೋಲ್ಸೇಲ್ ವ್ಯಾಪಾರಿಗಳಿಗೆ ಮಾತ್ರ ಅವಕಾಶವಿರಲಿದೆ ಎಂಬುವುದಾಗಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಆದೇಶ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸೆಂಟ್ರಲ್ ಮಾರ್ಕೆಟನ್ನು ಹೋಲ್ಸೇಲ್ ವ್ಯಾಪಾರಸ್ಥರು ಮಾತ್ರ ಬಳಸಬೇಕು. ರಾತ್ರಿ 11ರಿಂದ ಮುಂಜಾನೆ 4 ಗಂಟೆಯ ಒಳಗೆ ತಮ್ಮ ವ್ಯವಹಾರವನ್ನು ಮುಗಿಸಬೇಕು. ರಾತ್ರಿ ವೇಳೆ ಚಿಲ್ಲರೆ ವ್ಯಾಪಾರಿಗಳು ಹೋಲ್ಸೇಲ್ ವ್ಯಾಪಾರಿಗಳ ಬಳಿ ಖರೀದಿ ಮಾಡಬೇಕು. ಆದರೆ, ಸೆಂಟ್ರಲ್ ಮಾರುಕಟ್ಟೆಯೊಳಗಿರುವ ಚಿಲ್ಲರೆ ವ್ಯಾಪಾರಿಗಳಿಗೆ ಅನುಮತಿ ಇಲ್ಲ ಎಂದಿದ್ದಾರೆ.
ಮಾರ್ಕೆಟ್ ವ್ಯಾಪಾರಿಗಳಿಗೆ ಜಿಲ್ಲಾಡಳಿತದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೆಂಟ್ರಲ್ ಮಾರ್ಕೆಟ್ ಒಳಗೆ ಸಾರ್ವಜನಿಕರ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರು ನಗರದ ವಿವಿದೆಡೆ ಇರುವ ದಿನಸಿ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬೇಕು. ಎಪ್ರಿಲ್ 1ರಿಂದ ಸುರತ್ಕಲ್ನ ಮಾರುಕಟ್ಟೆ ಕೂಡ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಅಲ್ಲಿನ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸುರತ್ಕಲ್ ಮಾರ್ಕೆಟ್ ವ್ಯಾಪಾರಿಗಳಿಗೆ ಬೆಳಗ್ಗೆ 7ರಿಂದ 12ರವರೆಗೆ ಪರ್ಯಾಯ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾವುದೇ ಕಾರಣಕ್ಕೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ಪ್ರತೀದಿನ ದಿನಸಿ, ತರಕಾರಿ ಅಂಗಡಿಗಳು ಬೆಳಗ್ಗೆ 7ರಿಂದ 12 ರವರೆಗೆ ತೆರೆದಿರುತ್ತವೆ. 12 ಗಂಟೆಯ ಬಳಿಕ ಎಲ್ಲಾ ಅಂಗಡಿ, ಮಳಿಗೆಗಳು ಬಂದ್ ಮಾಡಬೇಕು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕಾರ ನೀಡಬೇಕು ಎಂದು ಆದೇಶ ನೀಡಿದ್ದಾರೆ.
Click this button or press Ctrl+G to toggle between Kannada and English