ಮಂಗಳೂರು : ನಗರ ಪ್ರದೇಶದಲ್ಲಿ ಬೇರೆ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವ ವಲಸೆ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಮನೆ ಮನೆಗೆ ತೆರಳಿ ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಂಗಳೂರಿನಲ್ಲಿ ಲಾಕ್ ಡೌನ್ ಇರುವ ಕಾರಣ ಬೇರೆಡೆಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಕೊರೆನೋ ಭೀತಿಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪ್ರದೇಶದಲ್ಲಿ ಸಾಮಾಜಿಕ ಅಂತರ ಅತ್ಯಂತ ಅಗತ್ಯವಾಗಿದೆ. ಆದರೆ ಇದರಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕ ವರ್ಗದ ಜನರಿಗೆ ಆಹಾರ ವಸ್ತುಗಳು ದೊರೆಯದೆ ಕಷ್ಟಪಡಬಾರದು ಎನ್ನುವ ಉದ್ಧೇಶದಿಂದ ದಿನ ಬಳಕೆ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ಕಡೆಗಳಿಂದ ಬಂದು ನೆಲೆಸಿರುವ ಅನೇಕ ಕಾರ್ಮಿಕರು ನಗರ ಪ್ರದೇಶದಲ್ಲಿದ್ದಾರೆ. ಸಾಕಷ್ಟು ಕಡೆಗಳಲ್ಲಿ ದಿನಸಿ ಅಂಗಡಿಗಳನ್ನು ತೆರೆದಿದ್ದರೂ ಆರ್ಥಿಕ ಪರಿಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದೆ. ಹಾಗಾಗಿ ಜಿಲ್ಲಾಡಳಿತ ಆಹಾರ ವಸ್ತುಗಳ ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ. ಆಹಾರ ವಸ್ತುಗಳು ಸಿಗದೆ ಸಮಸ್ಯೆ ಉಂಟಾಗಿದ್ದರೆ ಅಲ್ಲಿಗೆ ತೆರಳಿ ನಿತ್ಯೋಉಪಯೋಗಿ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ. ಆಹಾರ ಪದಾರ್ಥಗಳು ಖಾಲಿಯಾದರೆ ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ ಆಹಾರ ಪೂರೈಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ ಕಮಿಷನರ್ ದಿನೇಶ್ ಕುಮಾರ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರೂ ವಿಶೇಷವಾಗಿ ಕಾಳಜಿ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ದಿವಾಕರ್ ಪಾಂಡೇಶ್ವರ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ಸ್ಥಳೀಯ ಮನಪಾ ಸದಸ್ಯರಾದ ರೇವತಿಶ್ಯಾಮ್ ಸುಂದರ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್,ಕಾರ್ಮಿಕ ಇಲಾಖೆಯ ಅಧಿಕಾರಿ ವಿಮಲಾ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English