ಬೆಂಗಳೂರು: ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಕಂಟೇನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನೀಡಲಾಗಿದ್ದ ಅವಕಾಶವನ್ನು ಹಿಂಪಡೆದುಕೊಂಡಿದ್ದು, ಏ.20ರಿಂದ ಯಥಾಸ್ಥಿತಿ ಮುಂದುವರೆಯಲಿದೆ.
ಏಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಶೇ. 33ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ನೀಡಲಾಗಿದ್ದ ಅವಕಾಶವನ್ನು ಕೂಡಾ ಸರ್ಕಾರ ಹಿಂಪಡೆದುಕೊಂಡಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ
ಸರ್ಕಾರ ಮಧ್ಯಾಹ್ನ ತೆಗೆದುಕೊಂಡ ಮುಕ್ತ ಅವಕಾಶ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ವಾಪಾಸ್ ಪಡೆದುಕೊಂಡಿದೆ.
ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಲಾಕ್ ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಐಟಿ ಬಿಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ನೀತಿಯನ್ನು ಮುಂದುವರೆಸಲಾಗುವುದು, ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಪಪಡಿಸಿದ್ದಾರೆ.
Click this button or press Ctrl+G to toggle between Kannada and English