ಮಂಗಳೂರು :ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ರೂವಾರಿ ಹಾಗು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಜಯ ಸಿ. ಸುವರ್ಣ ಸಭಾಭವನ ಹಾಗೂ ರಾಘವೇಂದ್ರ ಕೆ. ಭೋಜನ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಈ ಹಿಂದೆ ಮೊದಲ ಸಭಾ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸಿದಾಗ ಹೆಚ್ಚಿನ ಆರ್ಥಿಕ ಸಮಸ್ಯೆ ಇದ್ದರೂ ಸಹ ಸಭಾ ಭವನದ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಿತ್ತು. ಈಗ ಶ್ರೀ ಕ್ಷೇತ್ರದಲ್ಲಿ ಒಟ್ಟು ಆರು ಸಭಾ ಭವನ ನಿರ್ಮಾಣಗೊಂಡಿದ್ದು ದೇವರ ಅನುಗ್ರಹದಿಂದಾಗಿ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಿವೆ ಎಂದರು.
ಪ್ರಸ್ತುತ ಸಭಾ ಭವನವು 6500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು ಸುಮಾರು 1200 ಜನರು ಕುಳಿತು ಕೊಳ್ಳಬಹುದಾಗಿದ್ದು ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದ್ದು, ಭೋಜನ ಶಾಲೆಯು 7500 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವುದಾಗಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವ ಮಹಾಸಭಾ ಮುಂಬಯಿ ಇದರ ಅಧ್ಯಕ್ಷ ಜಯ ಸಿ. ಸುವರ್ಣ ವಹಿಸಿದ್ದರು.
ಉದ್ಯಮಿ ಕೆ.ಪಿ.ನಂಜುಂಡಿ, ಬೆಂಗಳೂರು ಬಿಲ್ಲವರ ಸಮಿತಿ ಅಧ್ಯಕ್ಷ ಬಿ.ವಿಜಯ್ ಕುಮಾರ್, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಹೆಚ್.ಎಸ್ ಸಾಯಿರಾಂ, ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಆಡಳಿತ ಸಮಿತಿ ಖಜಾಂಚಿ ಪದ್ಮರಾಜ್, ವಕ್ತಾರ ಹರಿಕೃಷ್ಣ ಬಂಟ್ವಾಳ್, ಆಡಳಿತ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ಕೂಳೂರು ಇನ್ನಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English