ಮುಂಬಯಿ :ಮಹಾರಾಷ್ಟ್ರದ ಹುಲಿ ಎಂದೇ ಪ್ರಸಿದ್ಧರಾದ, ಮಹಾರಾಷ್ಟ್ರದ್ಲಲಿ ಶಿವಸೇನೆಯನ್ನು ಅಧಿಕಾರಕ್ಕೆ ತಂದ ಬಾಳ ಠಾಕ್ರೆ ದೇಹಕ್ಕೆ ಹಲವಾರು ಜನರ ಸಮ್ಮಖದಲ್ಲಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಠಾಕ್ರೆಯವರ ದೇಹ ಪಂಚಭೂತಗಳಲ್ಲಿ ಲೀನವಾಯಿತು. ಶಿವಸೇನೆ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು.
ಠಾಕ್ರೆ ಶವವನ್ನು ಬೆಳಗ್ಗೆ 9 ಗಂಟೆಗೆ ಅವರ ನಿವಾಸ ‘ಮಾತೋಶ್ರೀ’ ಯಿಂದ ಹೊರಕ್ಕೆ ತರಲಾಯಿತು. ಗಾಜಿನ ಪೆಟ್ಟಿಗೆಯಲ್ಲಿ ಇರಿಸಿದ್ದ ದೇಹವನ್ನು ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಶಿವಾಜಿ ಪಾರ್ಕ್‌ಗೆ ಕೊಂಡೊಯ್ಯಲಾಯಿತು. ಪುತ್ರ ಉದ್ಧವ್, ಅವರ ಪತ್ನಿ ರಶ್ಮಿ, ಪುತ್ರ ಆದಿತ್ಯಾ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ವರಿಷ್ಠ ರಾಜ್, ಅವತ ಪತ್ನಿ ಶರ್ಮಿಳಾ, ಮಕ್ಕಳು ವಾಹನದಲ್ಲಿದ್ದರು. 8 ತಾಸು ಮೆರವಣಿಗೆ ಉಪನಗರ ಬಾಂದ್ರಾದ ಕಲಾನಗರದಲ್ಲಿರುವ ಮಾತೋಶ್ರೀಯಿಂದ ದಾದರ್ ನ ಶಿವಾಜಿ ಪಾರ್ಕ್ ತನಕ ನಡೆಯಿತು. ಠಾಕ್ರೆಯ ಅಂತ್ಯ ಯಾತ್ರೆಯು ಮುಂಬಯಿ ಇಷ್ಟರ ತನಕ ಕಂಡು ಕೇಳರಿಯದ ಭವ್ಯ ಮೆರವಣಿಗೆಯೊಂದಕ್ಕೆ ಸಾಕ್ಷಿಯಾಯಿತು.
ಜನರು ತಮ್ಮ ಅಂಗಡಿಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಮುಚ್ಚಿ ಮೆರವಣಿಗೆಯಲ್ಲಿ ಭಾಗವಹಿಸಿ ಅಗಲಿದ ಮರಾಠಿ ವ್ಯಾಘ್ರನಿಗೆ ಅಂತಿಮ ನಮನ ಸಲ್ಲಿಸಿದರು. ಠಾಕ್ರೆಯ ಒಂದು ಕರೆಗೆ ಸಮಸ್ತ ಮುಂಬಯಿ ಬಾಗಿಲು ಮುಚ್ಚುತ್ತಿತ್ತು. ಬದುಕಿದ್ದಾಗ ತೋರಿಸಿದ್ದ ಠಾಕ್ರೆಯ ಈ ಚಮತ್ಕಾರ ಸಾವಿನಲ್ಲೂ ಕಂಡು ಬಂದದ್ದು ವಿಶೇಷವಾಗಿತ್ತು. ಮನೆ, ವಾಣಿಜ್ಯ ಮಳಿಗೆ, ಮರ, ಜಾಹೀರಾತು ಫಲಕಗಳ ಮೇಲೆ ನಿಂತು ಕೆಲವರು ಮೃತ ನಾಯಕನ ಅಂತಿಮ ದರ್ಶನ ಪಡೆದರು. ಮೆರವಣಿಗೆ ವೇಳೆ ನೂಕುನುಗ್ಗಲು , ಕಾಲ್ತುಳಿತ ಸಂಭವಿಸದಂತೆ ಪೊಲೀಸರು ಎಚ್ಚರಿಕೆವಹಿಸಿದ್ದರು. ಬಾಳಾ ಸಾಹೇಬ್ ಠಾಕ್ರೆ ಯವರ ಅಂತ್ಯಕ್ರಿಯೆಯ ಮೆರವಣಿಗೆ ಯುದ್ಧಕ್ಕೂ ಅವರ ಪರ ಘೋಷಣೆಗಳು ಮೊಳಗಿದವು.
Click this button or press Ctrl+G to toggle between Kannada and English