ಮಂಗಳೂರು :ಸೌಜನ್ಯಾ ಕೊಲೆ ಪ್ರಕರಣದ ತನಿಖೆಯನ್ನು ತತ್‌ಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ದ.ಕ. ಶ್ರೀರಾಮ ಸೇನೆ ರಾಜ್ಯ ವಕ್ತಾರ ಮಧುಕರ ಮುದ್ರಾಡಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆಯೂ ಹಲವು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಹಿಂದಿನ ಯಾವುದೇ ಪ್ರಕರಣದಲ್ಲಿ ಕೂಡಾ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿವೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಸಂತೋಷ್ ರಾವ್‌ನನ್ನು ಬಂಧಿಸಲಾಗಿದ್ದರೂ ಈ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳಿರುವುದರಿಂದ ನೈಜ ಆರೋಪಿಗಳ ಪತ್ತೆಗೆ ಸಿಬಿಐ ತನಿಖೆಯೇ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತತ್‌ಕ್ಷಣ ಸಿಬಿಐ ತನಿಖೆಗೊಪ್ಪಿಸಬೇಕೆಂದು ಅವರು ಆಗ್ರಹಿಸಿದರು.
ದತ್ತಪೀಠದ ದತ್ತಪಾದುಕೆ ದರ್ಶನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನ. 25ರಂದು ಶ್ರೀರಾಮ ಸೇನೆಯ ವತಿಯಿಂದ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಶ್ರೀ ರಾಮ ಸೇನೆ ಕಾರ್ಯಕರ್ತರಿಗೂ ದತ್ತಪೀಠಕ್ಕೆ ತೆರಳುವ ಅವಕಾಶ ಸಿಕ್ಕಿದೆ. ದತ್ತಾತ್ರೇಯನ ಹೆಸರಲ್ಲಿ ಅಧಿಕಾರಕ್ಕೆ ಬಂದ ಉಸ್ತುವಾರಿ ಸಚಿವರು ಇಂದು ಪೀಠದ ಬಗೆಗೆ ನಿರಾಸಕ್ತಿ ಹೊಂದಿದ್ದಾರೆ. ಸಚಿವರು ಪೀಠದ ಅಭಿವೃದ್ದಿ ಕಾರ್ಯಗಳಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದರು. ಶಬರಿಮಲೆ ಯಾತ್ರಿಕರಿಗೆ ಕನಿಷ್ಠ ಪಕ್ಷ ಜಿಲ್ಲಾ ಕೇಂದ್ರದಿಂದ 10 ಬಸ್‌ಗಳನ್ನಾದರೂ ಕಳುಹಿಸಿಕೊಡಬೇಕು ಎಂಬ ಬೇಡಿಕೆಯನ್ನು ಕಳೆದ ಕೆಲ ವರ್ಷಗಳಿಂದ ಸಲ್ಲಿಸುತ್ತಾ ಬರಲಾಗಿದೆ. ಈ ಬಾರಿಯಾದರೂ ಬಡವರಿಗೆ ಈ ಅನುಕೂಲ ಕಲ್ಪಿಸಿ ಕೊಡಲಿ ಎಂದು ಅವರು ಮನವಿ ಮಾಡಿದರು.
ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯದರ್ಶಿ ಮಧುಸೂಧನ್ ಉರ್ವಾಸ್ಟೋರ್, ಉಪಾಧ್ಯಕ್ಷ ಗಣೇಶ್ ಅತ್ತಾವರ, ಪ್ರಧಾನ ಕಾರ್ಯದರ್ಶಿ ಯೋಗೀಶ್, ಪ್ರವೀಣ್ ಮೂಡಿಗೆರೆ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English