ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೊರರಾಜ್ಯದ ವಲಸೆ ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ಹೋಗಲು ಅಗತ್ಯ ಇರುವಷ್ಟು ರೈಲುಗಳನ್ನು ಒದಗಿಸಲು ಸಿದ್ಧರಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಂಬಂಧ ತಾನು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರೊಂದಿಗೆ ಮಾತನಾಡಿದ್ದು, ಮಂಗಳೂರಿಗೆ ಅಗತ್ಯವಿರುವಷ್ಟು ರೈಲ್ವೇ ಒದಗಿಸಲು ಕೇಂದ್ರ ಸರ್ಕಾರವಿದೆ. ಆದರೆ ಆಯಾ ರಾಜ್ಯದ ಕಾರ್ಮಿಕರನ್ನು ಸಂಬಂಧಪಟ್ಟ ರಾಜ್ಯಗಳು ಸ್ವೀಕರಿಸಲು ಒಪ್ಪಿಗೆ ನೀಡಬೇಕಿದೆ ಎಂದು ಅವರು ತಿಳಿಸಿದರು.
ಹೊರರಾಜ್ಯದ ಕಾರ್ಮಿಕರ ಬಗ್ಗೆ ಸಂಬಂಧಿಸಿದ ರಾಜ್ಯ ಸರಕಾರಗಳೊಂದಿಗೆ ಚರ್ಚಿಸಿ ಪ್ರಯಾಣಕ್ಕೆ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾತನಾಡಿ, ಸೇವಾ ಸಿಂಧೂ ವ್ಯವಸ್ಥೆಯಲ್ಲಿ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗಲು ಸುಮಾರು 20,000 ಮಂದಿ ನೋಂದಣಿ ಮಾಡಿದ್ದಾರೆ ಇದರಲ್ಲಿ 5000 ಮಂದಿ ಜಾರ್ಖಂಡ್ , 3000 ಉತ್ತರ ಪ್ರದೇಶ, 4000 ಮಂದಿ ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹೊರರಾಜ್ಯದ ಕಾರ್ಮಿಕರು ಸಂಚರಿಸಲು ರೈಲ್ವೆ ವ್ಯವಸ್ಥೆ ಮಾಡುವ ಸಂಬಂಧ ಈಗಾಗಲೇ ಮುಖ್ಯ ಕಾರ್ಯದರ್ಶಿಯೊಂದಿಗೆ ಹಾಗೂ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿರುವುದಾಗಿ ಹೇಳಿದರು.
ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಲು ಸುಮಾರು 20 ರೈಲುಗಳ ಅಗತ್ಯವಿದ್ದು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ.
ಆದಾಗ್ಯೂ ಸಲ್ಲದ ಅಪಪ್ರಚಾರ ಮಾಡಿ ಕಾರ್ಮಿಕರ ಹೆಸರಿನಲ್ಲಿ ಜಿಲ್ಲಾಡಳಿತದ ಮೇಲೆ ಆಪಾದನೆ ಮಾಡುತ್ತಿರುವವರ ಮುಖಂಡರ ಹೇಳಿಕೆ ನೋವು ತಂದಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಇದ್ದರು.
Click this button or press Ctrl+G to toggle between Kannada and English