ಮಂಗಳೂರು: ಜಿಲ್ಲೆಯಿಂದ ಉತ್ತರ ಭಾರತ ಸೇರಿದಂತೆ ಹೊರರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ರೈಲು ಪ್ರಯಾಣ ಶನಿವಾರದಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಈಗಾಗಲೇ ಸೇವಾ ಸಿಂಧು ಆನ್ ಲೈನ್ ನಲ್ಲಿ ನೋಂದಣಿ ಮಾಡಿರುವ ಕಾರ್ಮಿಕರಿಗೆ ಅಗತ್ಯ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಎಲ್ಲರನ್ನೂ ಅವರ ರಾಜ್ಯಗಳಿಗೆ ಕಳುಹಿಸಲು ರೈಲು ವ್ಯವಸ್ಥೆ ಮಾಡಲಾಗಿದೆ. ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಸ್ವತಃ ರೈಲು ನಿಲ್ದಾಣ ಕಡೆಗೆ ಬಂದು ಜಮಾಯಿಸುವ ಅಗತ್ಯವಿಲ್ಲ. ಪ್ರಯಾಣಕ್ಕೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇರುವ ಜಾರ್ಖಂಡ್ ರಾಜ್ಯದ ವಲಸೆ ಕಾರ್ಮಿಕರು ಇಂದು ಮೊದಲ ರೈಲಿನಲ್ಲಿ ಪ್ರಯಾಣ ಬೆಳೆಸಿದರು.
ಮಂಗಳೂರಿನಿಂದ ಜಾರ್ಖಂಡ್ಗೆ ಇಂದು ಸಂಜೆ 7 ಗಂಟೆಗೆ ಮೊದಲ ರೈಲು ಜಾರ್ಖಂಡ್ಗೆ ಪ್ರಯಾಣ ಬೆಳೆಸಿದ್ದು, 1240 ವಲಸೆ ಕಾರ್ಮಿಕರು ಊರಿಗೆ ಪ್ರಯಾಣ ಬೆಳೆಸಿದರು. ಸರ್ಕಾರ ರೈಲಿನ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ನಿನ್ನೆ ವದಂತಿ ನಂಬಿ ಮಂಗಳೂರು ರೈಲು ನಿಲ್ದಾಣಕ್ಕೆ ಸಾವಿರಾರು ವಲಸೆ ಕಾರ್ಮಿಕರು ಆಗಮಿಸಿದ್ದರು. ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಲಾಗಿತ್ತು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರಿಗೆ ರೈಲು ವ್ಯವಸ್ಥೆ ಮಾಡುವಂತೆ ಪತ್ರ ಬರೆದಿದ್ದರು.
ಇಂದು ಜಾರ್ಖಂಡ್ಗೆ ಮೊದಲ ರೈಲು ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಸೇವಾ ಸಿಂಧುವಿನಲ್ಲಿ ನೋಂದಾಯಿಸಿದ ವಲಸೆ ಕಾರ್ಮಿಕರನ್ನು ಕಳುಹಿಸಲಾಗಿದೆ. ವಲಸೆ ಕಾರ್ಮಿಕರನ್ನು 25 ಕೆಎಸ್ಆರ್ಟಿಸಿ ಬಸ್ ಮೂಲಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು ರೈಲಿಗೆ ಕಳುಹಿಸಲಾಗಿದೆ. ಅದಕ್ಕೂ ಮೊದಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇವರ ಆರೋಗ್ಯ ತಪಾಸಣೆ ಮಾಡಲಾಗಿತ್ತು.
Click this button or press Ctrl+G to toggle between Kannada and English