ಮಂಗಳೂರು : ಮಂಗಳವಾರ ನಿಧನರಾದ ವಿಜಯ ಕರ್ನಾಟಕದ ಹಿರಿಯ ಉಪಸಂಪಾದಕಿ ಡಾ.ಸೀತಾಲಕ್ಷ್ಮೀ ಕೆ.ವಿ. ಅವರಿಗೆ ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್‍ನಾಥ್ ಮಾತನಾಡಿ, ಪತ್ರಿಕೆಯ ಮಂಗಳೂರು ಆವೃತ್ತಿಯ ಆರಂಭದ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಸೀತಾಲಕ್ಷ್ಮೀ, ಸ್ನಾತಕೋತ್ತರ ಪದವಿ, ಎಂಫಿಲ್, ಎರಡೆರಡು ಡಾಕ್ಟರೇಟ್ ಜತೆಗೆ ಪುಸ್ತಕಗಳನ್ನು ಕೂಡಾ ಬರೆದು, ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಪತ್ರಕರ್ತೆ ಎಂದರು.
ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಮಾತನಾಡಿ, ಪತ್ರಕರ್ತೆ ಸೀತಾಲಕ್ಷ್ಮೀ ಅವರಷ್ಟು ಉನ್ನತ ವ್ಯಾಸಂಗ ಮಾಡಿದ ಬೇರೊಬ್ಬ ಪತ್ರಕರ್ತರು ಮಂಗಳೂರಿನಲ್ಲಿಲ್ಲ. ಅಷ್ಟು ಶಿಕ್ಷಣ ಪಡೆದಿದ್ದರೂ ಅವರಲ್ಲಿ ಯಾವುದೇ ಅಹಂ ಇರಲಿಲ್ಲ. ಪ್ರತಿಯೊಬ್ಬರ ಜತೆಯೂ ಬೆರೆಯುವ ಸ್ವಭಾಹ ಅವರದ್ದು. ಅವರು ಇತರರಿಗೆ ಮಾದರಿ ಎಂದರು.
ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೊರೊನಾ ಸಂದರ್ಭ ದಲ್ಲಿ ಇನ್ನಷ್ಟು ಜಾಗ್ರತೆ ವಹಿಸಬೇಕು. ವಿಜಯ ಕರ್ನಾಟಕದ ಮೂಲಕ ಮಾಧ್ಯಮ ಲೋಕ ಸಹಿತ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಸೀತಾಲಕ್ಷ್ಮೀ ಅವರ ಹೆಸರು ಚಿರಸ್ಥಾಯಿಯಾಗಿರಿಸಲು ಸಂಘ ದಿಂದ ಯಾವುದಾದರೂ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ಇಬ್ರಾಹಿಂ ಅಡ್ಕಸ್ಥಳ, ಮುಹಮ್ಮದ್ ಆರಿಫ್ ಪಡುಬಿದ್ರಿ, ಭಾಸ್ಕರ ರೈ ಕಟ್ಟ ಮಾತನಾಡಿ, ಶ್ರದ್ಧಾಂಜಲಿ ಸಮರ್ಪಿಸಿದರು. ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English