ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡರನ್ನು ಏಕ್ ದಂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿ ನಿರ್ದೇಶಕರಾಗಿ ನಿಯುಕ್ತಿಗೊಳಿಸಿದ ನಿರ್ಧಾರದ ಹಿಂದೆ ಏನಿದೆ ಮರ್ಮ ಎನ್ನುವ ರಹಸ್ಯ ವಿಚಾರ ಕಡೆ ಕಣ್ಣು ಹಾಕಿದರೆ ಜಿಲ್ಲೆಗೆ ಬಂದ ಎಲ್ಲ ಡಿಸಿಗಳ ಎತ್ತಂಗಡಿಯ ಹಿಂದೆ ಇರುವ ರಾಜಕಾರಣದ ನಂಟು ಹೊರಬೀಳುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಮಾರಕ, ರಾಜಕಾರಣಿಗಳ ಮಾತು ಕೇಳುತ್ತಿಲ್ಲ ಎನ್ನುವ ನಾನಾ ಕಾರಣಗಳನ್ನು ಒಡ್ಡಿಕೊಂಡು ಜಿಲ್ಲೆಯ ಡಿಸಿಗಳನ್ನು ಏಕ್ ದಂ ಎತ್ತಂಗಡಿ ಮಾಡುವ ಪರಿಪಾಠವಂತೂ ಜಿಲ್ಲೆಯಲ್ಲಿ ಸಖತ್ ಕಾಣಿಸಿಕೊಂಡಿದೆ. ಈಗ ಇಂತಹ ಒಂದು ಪ್ರಕರಣ ನಾಗರಿಕರ ಮುಂದೆ ಬಂದು ನಿಂತಿದೆ.
ಮಂಗಳೂರು ನಗರದ ದೇರೆಬೈಲ್ ಪ್ರದೇಶದಲ್ಲಿ ನಿರ್ಮಿಸಲು ಸೂಚಿಸಿದ್ದ ಅಂಬೇಡ್ಕರ್ ಭವನವನ್ನು ಉರ್ವ ಮಾರ್ಕೆಟ್ ಪ್ರದೇಶಕ್ಕೆ ಸ್ಥಳಾಂತರಿಸಲು ಷಡ್ಯಂತ್ರ ರೂಪಿಸಿದರ ಹಿಂದೆ ಶಾಸಕ ಎನ್. ಯೋಗೀಶ್ ಭಟ್ ಇದ್ದಾರೆ ಎನ್ನುವ ಡಿಸಿ ಎನ್.ಎಸ್. ಚನ್ನಪ್ಪರ ಸೂಚ್ಯ ಮಾತಿಗೆ ಈಗ ಅವರ ತಲೆ ದಂಡವಾಗಿದೆ ಎನ್ನುವ ಸುದ್ದಿಗಳು ಹೊರಬೀಳುತ್ತಿದೆ. ಮೂಲಗಳ ಪ್ರಕಾರ ಯೋಗೀಶ್ ಭಟ್ಟರಿಗೂ ಚನ್ನಪ್ಪ ಗೌಡರಿಗೂ ಮಾತಿನ ಚಕಮಕಿಯೇ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ `ಯೋಗೀಶಣ್ಣ’ನಿಗಾದ ಬೇಸರ ಶಮನಗೊಳಿಸಲು ಸರ್ಕಾರದ ಮಟ್ಟದಲ್ಲಿ ಮಾತಾಡಿ ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ. ನಗರದ ಉರ್ವಸ್ಟೋರಿನಲ್ಲಿ ಸ್ಥಾಪಿಸಬೇಕೆಂದು ನಿಗದಿಯಾಗಿದ್ದಅಂಬೇಡ್ಕರ್ ಭವನವನ್ನು ಉರ್ವ ಮಾರ್ಕೆಟ್ಗೆ ಸ್ಥಳಾಂತರಿಸಲು ಚನ್ನಪ್ಪ ಗೌಡ ವರ್ಗಾವಣೆ ಹೊರಟಿದ್ದರು.
ಎಡವಟ್ಟಾದ ಹೇಳಿಕೆ:
ದಕ್ಷಿಣ ಕನ್ನಡದ ಹಿಂದಿನ ಡಿಸಿ ಸುಭೋದ್ ಯಾದವ್ ಈ ಸ್ಥಳವನ್ನು ಅಂಬೇಡ್ಕರ್ ಭವನಕ್ಕೆ ನಿಗದಿಪಡಿಸಿದ್ದರು ಮತ್ತು ಆರ್ಟಿಸಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದರೂ ಸ್ಥಳಾಂತರಕ್ಕೆ ಹೊರಟಿರುವುದು ಕಾನೂನುಬಾಹಿರವೆಂದು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ, ದಸಂಸ (ಅಂಬೇಡ್ಕರ್ ವಾದ), ದಸಂಸ (ಡಾಕ್ಟರ್ ಅಂಬೇಡ್ಕರ್ವಾದ), ದಸಂಸ (ಪ್ರೊ ಬಿ ಕ್ರಷ್ಣಪ್ಪ ಸ್ಥಾಪಿತ), ಪ/ಜಾ, ಪ/ಪಂಗಡಗಳ ಹಕ್ಕುಗಳ ನಾಗರಿಕ ರಕ್ಷಣಾ ಸಮಿತಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಜಂಟಿಯಾಗಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಇದಕ್ಕೆ ಎನ್.ಎಸ್. ಚನ್ನಪ್ಪಗೌಡರು, “ಶಾಸಕ ಯೋಗೀಶ್ ಭಟ್ಟರೇ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ಅವರನ್ನೇ ಕೇಳಿ” ಎಂದು ಕಳುಹಿಸಿದ್ದರು.
ಈ ಬಗ್ಗೆ ದಲಿತ ಸಂಘಟನೆಗಳ ಜಂಟಿ ಸಮಿತಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, “ಜಿಲ್ಲಾಧಿಕಾರಿ ಚನ್ನಪ್ಪ ಅವರು ಶಾಸಕ ಯೋಗೀಶ್ ಭಟ್ಟರತ್ತ ಬೆರಳುತೋರಿಸುತ್ತಿದ್ದಾರೆ. ಅಂಬೇಡ್ಕರ್ ಭವನದ ಜಾಗದಲ್ಲಿ ಕೇಸರಿ ಸಂಘಟನೆಗಳ ಭವನ ಸ್ಥಾಪನೆಗೆ ಹೊರಟಿದ್ದಾರೆಂಬ ಗುಮಾನಿಯಿದೆ. ಹಿಂದೆ 2 ಬಾರಿ ಯೋಗೀಶ್ ಭಟ್ಟರಿಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲ. ಇದಕ್ಕೆ ತಕ್ಕಂತೆ ಡಿಸಿಯೂ ಅದನ್ನೇ ಹೇಳುತ್ತಿದ್ದಾರೆ” ಎಂದು ಆಪಾದಿಸಿದ್ದರು. ಇದೇ ಹೇಳಿಕೆಗಳು ಮಾಧ್ಯಮಗಳು ಸೇರಿದಂತೆ ಮಂಗಳೂರಿನ ಖಾಸಗಿ ಚಾನೆಲ್ ಗಳು ಈ ವಿಚಾರವನ್ನು ಎತ್ತಿಹಾಕಿದ ಪರಿಣಾಮ ಕೆರಳಿದ ಯೋಗೀಶ್ ಭಟ್, ಈ ಹೇಳಿಕೆಗಳ ಕುರಿತು ಚನ್ನಪ್ಪ ಗೌಡರಿಗೆ ಕರೆಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರಂತೆ. ದ.ಕ. ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಟಿ. ರವಿಗೆ ಕರೆ ಮಾಡಿ “ಡಿಸಿಯನ್ನು ಎತ್ತಂಗಡಿಮಾಡಿ” ಎಂದಿದ್ದಾರಂತೆ. ಅಂತೆಯೇ ವರ್ಗಾವಣೆ ಆದೇಶದ ಫ್ಯಾಕ್ಸ್ ಬಂದಿದ್ದು, ಚನ್ನಪ್ಪಗೌಡರು ಗಂಟು ಮೂಟೆ ಕಟ್ಟಿದ್ದಾರೆಂದು ತಿಳಿದುಬಂದಿದೆ.
ಅಂಬೇಡ್ಕರ್ ಭವನಕ್ಕೆ ಎದ್ದು ನಿಂತ ಸಂಘಟನೆ
ಅಂಬೇಡ್ಕರ್ ಭವನವನ್ನು ಬೇರೆ ಯಾವುದೇ ಪ್ರದೇಶಕ್ಕೆ ಸ್ಥಳಾಂತರಿಸಲು ಯತ್ನಿಸಿದಲ್ಲಿ ಇದನ್ನು ಅಂಬೇಡ್ಕರ್ ಗೆ ಮಾಡಿದ ಅವಮಾನ ಎಂದು ಭಾವಿಸಲಾಗುವುದು ಹಾಗೂ ಈ ನಡೆಯನ್ನು ದಲಿತರು ಸಹಿಸರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ರಾಜ್ಯ ಸಂಚಾಲಕ ಎಂ. ದೇವದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂಬೇಡ್ಕರ್ ಭವನಕ್ಕಾಗಿ ಅಂದಿನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ದೇರೆಬೈಲ್ ವಾರ್ಡ್ ನಲ್ಲಿ 1.61 ಎಕರೆ ಭೂಮಿ ಗುರುತಿಸಿ ಸಮೀಕ್ಷೆ ನಡೆಸಿದ್ದರು. ಆದರೆ ಈ ಭವನಕ್ಕೆ ನೀಲಿ ನಕಾಶೆ ರೂಪಿಸುವಮೊದಲೇ ಇದನ್ನು ಉರ್ವ ಮಾರ್ಕೆಟ್ ಪ್ರದೇಶಕ್ಕೆ ಸ್ಥಳಾಂತರಿಸುವ ಯತ್ನ ನಡೆಸಲಾಗಿದೆ. ಈ ಷಡ್ಯಂತ್ರದ ಹಿಂದೆ ಶಾಸಕ ಯೋಗೀಶ್ ಭಟ್ ಇದ್ದಾರೆ ಎಂದು ಆರೋಪಿಸಿದರು.
“ಯೋಗೀಶ್ ಭಟ್ ಇದರ ಹಿಂದೆ ಇದ್ದಾರೆ. ಜಿಲ್ಲಾಡಳಿತ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದ ನಂತರ ಭಟ್ ಹಸ್ತಕ್ಷೇಪ ಮಾಡುವ ಅಗತ್ಯವೇನಿತ್ತು ?ಅಂಬೇಡ್ಕರ್ ಭವನಕ್ಕೆ ಸೂಚಿಸಿದ ಭೂಮಿಯನ್ನು ಉದ್ಯಾನವನ, ಶಿಕ್ಷಣ, ಸಂಸ್ಥೆಗಳ ಬೇಡಿಕೆ ಮುಂತಾದ ಕಾರಣಗಳನ್ನು ನೀಡಿ ಅಂಬೇಡ್ಕರ್ ಭವನ ಸ್ಥಳಾಂತರಿಸಲು ಯತ್ನಿಸುತ್ತಿದ್ದಾರೆ. ಈ ಕುರಿತು ಉಗ್ರ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿಕೊಂಡಿದ್ದೇವೆಂದು ಅವರು ತಿಳಿಸಿದ್ದಾರೆ. ಅಂದಹಾಗೆ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅಂಬೇಡ್ಕರ್ ಭನವಗಳು ನಿರ್ಮಾಣವಾಗಿದೆ. ಆದರೆ ದ.ಕ.ದಲ್ಲಿ ಮಾತ್ರ ಇನ್ನೂ ಸಿದ್ಧವಾಗಬೇಕಿದೆ.
ಡಿಸಿ ವರ್ಗಾವಣೆಗೆ ಕೊನೆ ಕ್ಷಣದಲ್ಲಿ ಬ್ರೇಕ್ !
ಮಂಗಳೂರು ಶಾಸಕ ಯೋಗೀಶ್ ಭಟ್ಟರ ಒಂದೇ ಮಾತಿನಿಂದ ವರ್ಗಾವಣೆಗೆ ಬಿದ್ದ ದ.ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರ ವರ್ಗಾವಣೆ ಆದೇಶವನ್ನು ರಾಜ್ಯ ಚುನಾವಣಾ ಆಯೋಗ ತಾತ್ಕಾಲಿಕವಾಗಿ ತಡೆಹಿಡಿಯುವ ಮೂಲಕ ಭಟ್ಟರಿಗೆ ಶಾಕ್ ಕೊಟ್ಟಿದೆ. ನವೆಂಬರ್ 17ರಂದು ಸರಕಾರದಿಂದ ಫ್ಯಾಕ್ಸ್ ವೊಂದು ಡಿಸಿಗೆ ವರ್ಗಾವಣೆಗೆ ಆದೇಶದ ಉಲ್ಲೇಖವಿತ್ತು. ಆದರೆ ನವೆಂಬರ್ 20ರಂದು ಡಿಸಿ ಕಚೇರಿಗೆ ಮತ್ತೊಂದು ಫ್ಯಾಕ್ಸ್ ಬಂದು ಈ ವರ್ಗಾವಣೆಯನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಗಿದೆ ಎನ್ನುವ ಒಕ್ಕಣೆಯಿತ್ತು. ಮುಂಬರುವ ಚುನಾವಣೆ ತೀರಾ ಹತ್ತಿರದಲ್ಲಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಆಯೋಗದ ಪೂರ್ವಾನುಮತಿ ಇಲ್ಲದೆ ಅಧಿಕಾರ ಹಸ್ತಾಂತರಿಸಬಾರದು ಎಂದು ಆಯೋಗ ನಿರ್ದೇಶನ ನೀಡಿದೆ. ಈ ಮೂಲಕ ಡಿಸಿ ವರ್ಗಾವಣೆಗೆ ತಾತ್ಕಾಲಿಕ ರೀತಿಯಲ್ಲಿ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಚುನಾವಣೆ ಮುಗಿಯುವ ವರೆಗೂ ಈ ಬ್ರೇಕ್ ಹೀಗೇನೇ ಇರಲಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಗೊತ್ತಾಗಿಲ್ಲ.
Click this button or press Ctrl+G to toggle between Kannada and English