ಬಡವರ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಭದ್ರ ಬುನಾದಿ ಪ್ಯಾಕೇಜ್‌ : ನಳಿನ್‌ಕುಮಾರ್ ಕಟೀಲ್

11:09 PM, Thursday, May 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

nalin Kateel ಮಂಗಳೂರು : ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಯಗಳನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೈಗೊಂಡ ಕ್ರಮಗಳು ಬಡವರ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಭದ್ರ ಬುನಾದಿಯಾಗಲಿದೆ. ತನ್ಮೂಲಕ ಕೇಂದ್ರ ಸರ್ಕಾರ ಸ್ವಾವಲಂಬಿ ಭಾರತದೆಡೆಗೆ ದಿಟ್ಟ ಹೆಜ್ಜೆ ಇರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಮೊದಲ ಹಂತದಲ್ಲಿ ಉದ್ಯಮ ಕ್ಷೇತ್ರದ ಚೇತರಿಕೆಗೆ ಕೊಡುಗೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಅವರು ದ್ವಿತೀಯ ಹಂತದಲ್ಲಿ ವಲಸೆ ಕಾರ್ಮಿಕರು, ಸಣ್ಣ ಹಿಡುವಳಿ ರೈತರು, ಸ್ವಯಂ ಉದ್ಯೋಗಿಗಳನ್ನು ಗಮನದಲ್ಲಿರಿಸಿ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ೪೨೦೦ ಕೋಟಿ ರೂ. ಹಾಗೂ ಕೃಷಿ ಉತ್ಪಾದನೆ ಹೆಚ್ಚಳಕ್ಕೆ 6700  ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ಒಂದೇ ವೇತನ ಹಾಗೂ ಕೆಲಸ ಕಳಕೊಂಡವರಿಗೆ ಮತ್ತೆ ಕೆಲಸ ನೀಡುವ ಘೋಷಣೆ ಆತಂಕದಲ್ಲಿ ಇರುವ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ಅವಕಾಶ ದೊರೆತಿದೆ. ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳು ಉಚಿತ ಆಹಾರ ಧಾನ್ಯಗಳ ವಿತರಣೆಗೆ ೩,೫೦೦ ಕೋಟಿ ರೂ. ಮೀಸಲಿರಿಸುವ ಮೂಲಕ ಕಾರ್ಮಿಕರ ಬದುಕಿನಲ್ಲಿ ಚೈತನ್ಯ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಹಾಲಿ ಕೃಷಿ ಸಾಲಗಳ ಮೇಲಿನ ಬಡ್ಡಿಗೆ ನೀಡಲಾಗುತ್ತಿರುವ ವಿನಾಯಿತಿಯನ್ನು 2020 ಮೇ 31 ರವರೆಗೆ ವಿಸ್ತರಣೆ. ನರೇಗಾ ಯೋಜನೆಯಡಿ ದಿನಗೂಲಿ ಏರಿಕೆ. ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ವಿತರಣೆ. ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ನಬಾರ್ಡ್‌ನಿಂದ ಹೆಚ್ಚುವರಿ 29,500 ಕೋಟಿ ರೂ.ನೆರವು ಸಹಿತ ವಿವಿಧ ಘೋಷಣೆಗಳು ರೈತರ ಅಭ್ಯುದಯಕ್ಕೆ ಸಹಕಾರಿಯಾಗಲಿದೆ. ರಾಜ್ಯದ ಜನತೆಯ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುವುದಾಗಿ ನಳಿನ್‌ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English