ಉಡುಪಿ: ಕ್ವಾರಂಟೈನ್ ನಲ್ಲಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದ ಕುಂದಾಪುರ ಮೂಲದ ವ್ಯಕ್ತಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಮಹಾರಾಷ್ಟ್ರದಿಂದ ಮೇ 5ರಂದು ಹುಟ್ಟೂರಾದ ಕುಂದಾಪುರ ಮೂಲದ 54 ವರ್ಷದ ವ್ಯಕ್ತಿ ಬಂದಿದ್ದರು. ಈ ವ್ಯಕ್ತಿಗೆ ಮೇ 13ನೇ ಸಂಜೆ ಹೃದಯಾಘಾತವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿ ಮೇ 14 ಸಂಜೆ ಮೃತಪಟ್ಟಿರುತ್ತಾರೆ.
ವ್ಯಕ್ತಿಯ ಗಂಟಲು ದೃವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ವ್ಯಕ್ತಿ ಕೋವಿಡ್-19 ಸೋಂಕಿತನಾಗಿರುವ ಬಗ್ಗೆ ದೃಢವಾಗಿದೆ. ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ದಿನದಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಕೊಡಲಾಗಿದೆ.
ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ಕೆಲವೊಂದು ಸಿಬ್ಬಂದಿಗಳನ್ನು ಕ್ವಾರಂಟೈನಿಗೆ ಒಳಪಡಿಸಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗಿದ್ದು, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಮತ್ತು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ಹೊರರೋಗಿ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಸಿದ್ದಾರೆ.
Click this button or press Ctrl+G to toggle between Kannada and English