ಕೊರೋನಾ ನಡುವೆ ಮಂಗಳೂರಿಗೆ ‘ಅಂಫಾನ್’ ಚಂಡಮಾರುತ ಭೀತಿ

10:21 PM, Sunday, May 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

amfanಮಂಗಳೂರು : ಒಂದೆಡೆ ಕೊರೋನಾ ಭೀತಿ ಮುಂದುವರಿಯುತ್ತಿರುವಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮ ಕರಾವಳಿ ತೀರದಲ್ಲಿ ‘ಅಂಫಾನ್’ ಎಂಬ ಹೆಸರಿನ ಚಂಡಮಾರುತದ ಭೀತಿಯೂ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಮೇ 18ರಂದು ಈ ಚಂಡಮಾರುತವು ತೀವ್ರ ಸ್ವರೂಪ ಪಡೆಯಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ‘ಎಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಅಲ್ಲದೆ ಮುಂಗಾರು ಪ್ರವೇಶಕ್ಕೆ ಈ ಚಂಡಮಾರುತವು ತೀವ್ರ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡ (ಟ್ರಫ್) ನಿರ್ಮಾಣವಾಗಿದ್ದು, ಇದರಿಂದ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

ಹವಾಮಾನ ಇಲಾಖೆಯ ವಾಡಿಕೆಯಂತೆ ಮಾರ್ಚ್‌ನಿಂದ ಮೇವರೆಗೆ ಸುರಿಯುವ ಪೂರ್ವ ಮುಂಗಾರು ಮಳೆಯು ಕರಾವಳಿ ಭಾಗದಲ್ಲಿ ಉತ್ತಮ ಆರಂಭ ಪಡೆದಿದೆ. ಮಾ.1ರಿಂದ ಮೇ 15ರವರೆಗಿನ ಅಂಕಿ ಅಂಶದಂತೆ ದ.ಕ. ಜಿಲ್ಲೆಯಲ್ಲಿ 113 ಮಿ.ಮೀ. ವಾಡಿಕೆ ಮಳೆಯಲ್ಲಿ 139 ಮಿ.ಮೀ. ಮಳೆಯೊಂದಿಗೆ ಶೇ.23ರಷ್ಟು ಹೆಚ್ಚಳ ಕಂಡು ಬಂದಿದೆ.

ಕಳೆದ ಬಾರಿ ರಾಜ್ಯ ಕರಾವಳಿಗೆ ವಾಡಿಕೆಗಿಂತ ತಡವಾಗಿ ಮುಂಗಾರು ಅಪ್ಪಳಿಸಿತ್ತು. ಕಳೆದ ವರ್ಷ ಜೂನ್ 14ರಂದು ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಪಡೆದಿತ್ತು. ಎರಡು ವರ್ಷಗಳಿಂದ ಕರಾವಳಿಯಲ್ಲಿ ಮುಂಗಾರು ಉತ್ತಮವಾಗಿತ್ತು. 2018ರಲ್ಲಿ ಶೇ.3ರಷ್ಟು ಮತ್ತು 2019ರಲ್ಲಿ ಶೇ.24ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮತ್ತು ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮೇ ಅಂತ್ಯಕ್ಕೆ ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಪ್ರಭಾವ ಬೀರುತ್ತಿರುವ ಚಂಡಮಾರುತದ ಪರಿಣಾಮ ಜೂ. 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿ ಬಳಿಕ ಒಂದೆರಡು ದಿನದ ಬಳಿಕ ರಾಜ್ಯ ಕರಾವಳಿಗೆ ಪ್ರವೇಶ ಪಡೆಯಬಹುದು ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English