ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮೇ 31ರ ವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು, ರಾಜ್ಯಸರ್ಕಾರ , ಕೇಂದ್ರಾಡಳಿತ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ
ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ ಲಾಕ್ ಡೌನ್ ಇನ್ನೆರಡು ವಾರಗಳ ಕಾಲ ಮುಂದುವರಿಯಲಿದೆ.
ದೇಶಾದ್ಯಂತ ಈ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಕೇಂದ್ರ ಗೃಹಸಚಿವಾಲಯದ ಅನುಮತಿ ಮೇರೆಗೆ ತುರ್ತು ವೈದ್ಯಕೀಯ ಸೇವೆಗಳು, ಏರ್ ಆ್ಯಂಬುಲೆನ್ಸ್ ಸೇವೆಗಳು ಮತ್ತು ರಕ್ಷಣಾ ಉದ್ದೇಶಗಳನ್ನು ಹೊರತುಪಡಿಸಿದಂತೆ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಸಂಚಾರ ಇರುವುದಿಲ್ಲ.
ಯಾವುದೇ ಮೆಟ್ರೋ ರೈಲು ಸೇವೆಗಳು ಇರುವುದಿಲ್ಲ.
ಶಾಲಾ, ಕಾಲೇಜುಗಳು, ಶಿಕ್ಷಣ/ತರಬೇತಿ ಸಂಸ್ಥೆಗಳು ಇತ್ಯಾದಿ ಯಾವುದೇ ರೀತಿಯ ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುವುದಿಲ್ಲ.
ಹೊಟೇಲ್ ಗಳು, ರೆಸ್ಟೋರೆಂಟ್ ಸಹಿತ ಇತರೇ ಹಾಸ್ಪಿಟಾಲಿಟಿ ಸೇವೆಗಳಿಗೆ ನಿರ್ಬಂಧ ಮುಂದುವರಿಯಲಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಗಳು/ಹೋಂ ಡೆಲಿವರಿಗೆ ಮಾತ್ರವೇ ಅವಕಾಶ.
ಸಿನೆಮಾ ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ ಗಳು, ಸ್ವಿಮ್ಮಿಂಗ್ ಪೂಲ್ ಗಳು, ಮನೋರಂಜನಾ ಪಾರ್ಕ್ ಗಳು, ಮಲ್ಟಿಪ್ಲೆಕ್ಸ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಆಡಿಟೋರಿಯಂಗಳು, ಸಭಾಂಗಣಗಳು, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗಳನ್ನು ತೆರೆಯಲು ಅವಕಾಶವಿದ್ದರೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರುತ್ತದೆ.
ಎಲ್ಲಾ ರೀತಿಯ ಬೃಹತ್ ಸಾಮಾಜಿಕ, ರಾಜಕೀಯ, ಕ್ರೀಡಾ, ಮನೋರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ.
ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹಾಗೂ ಎಲ್ಲಾ ರೀತಿಯ ಧಾರ್ಮಿಕ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.
ಕೋವಿಡ್ ಸೋಂಕು ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು, ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳು ಕಡ್ಡಾಯವಾಗಿ ತಮ್ಮ ಮನೆಯಲ್ಲೇ ಇರಬೇಕು.
ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತಾಗಿಸಿ ಉಳಿದ ಕಡೆಗಳಲ್ಲಿ ಈ ಕೆಳಗಿನ ಕಾರ್ಯಚಟುವಟಿಕೆಗಳನ್ನು ಷರತ್ತುಬದ್ಧವಾಗಿ ನಡೆಸಬಹುದಾಗಿರುತ್ತದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪರಸ್ಪರ ಒಪ್ಪಿಗೆಯ ಮೇರೆಗೆ ಅಂತರ್ ರಾಜ್ಯ ಪ್ರಯಾಣಿಕ ವಾಹನಗಳು, ಬಸ್ಸುಗಳ ಓಡಾಟಕ್ಕೆ ಅವಕಾಶ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರದ ಮೇರೆಗೆ ರಾಜ್ಯದೊಳಗಿನ ಪ್ರಯಾಣಿಕರ ವಾಹನಗಳು ಹಾಗೂ ಬಸ್ಸುಗಳ ಓಡಾಟಕ್ಕೆ ಷರತ್ತುಬದ್ಧ ಅವಕಾಶ.
ಈಗಾಗಲೇ ಪ್ರಗತಿಯಲ್ಲಿರುವ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಅವರವರ ಊರುಗಳಿಗೆ ತಲುಪಿಸುವ ಕಾರ್ಯ ಅಬಾಧಿತವಾಗಿ ಮುಂದುವರಿಯಲಿದೆ.
ಕೋವಿಡ್ 19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನಗಳು ಈ ಮೊದಲಿನ ಸೂಚನೆಯಂತೇ ಮುಂದುವರಿಯಲಿದೆ.
Click this button or press Ctrl+G to toggle between Kannada and English