ಕೊರೋನಾ ನೆಪದಲ್ಲಿ ಕೇಂದ್ರ ಮಾರುಕಟ್ಟೆ ಎತ್ತಂಗಡಿ; ಅತಂತ್ರಗೊಂಡ ವ್ಯಾಪಾರಸ್ಥರು – ತೀವ್ರ ಹೋರಾಟಕ್ಕೆ ನಿರ್ಧಾರ

5:43 PM, Thursday, May 21st, 2020
Share
1 Star2 Stars3 Stars4 Stars5 Stars
(8 rating, 2 votes)
Loading...

Sunil-Bajalಮಂಗಳೂರು : ಕೊರೋನಾ ವೈರಸ್‌ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ತೀರಾ ಹಾಳಾಗಿದ್ದು, ಮತ್ತೊಂದು ಕಡೆ ಅದನ್ನೇ ನೆಪಮಾಡಿ ಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಕೇಂದ್ರ ಮಾರುಕಟ್ಟೆಯನ್ನು ಏಕಾಏಕಿಯಾಗಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ತಾತ್ಕಾಲಿಕ ನೆಲೆಯಲ್ಲಿಎತ್ತಂಗಡಿ ಮಾಡಿರುವುದು ಹಾಗೂ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ತೀರಾ ಅವೈಜ್ಞಾನಿಕ ಕ್ರಮ ಹಾಗೂ  ಖಂಡನೀಯವಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.

ದ.ಕ. ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಕೇಂದ್ರ ಮಾರುಕಟ್ಟೆ ಕಳೆದ ಹಲವು ದಶಕಗಳಿಂದ ಮಂಗಳೂರು ನಗರದ ಹೃದಯ ಭಾಗದಲ್ಲಿರುವ 2ಕಟ್ಟಡಗಳಲ್ಲಿ ಕಾರ‍್ಯಚರಿಸಿಕೊಂಡಿದ್ದು, ದಿನವೊಂದಕ್ಕೆ ಕೋಟ್ಯಾಂತರ ರೂ.ವಹಿವಾಟು ನಡೆಸುವ ಸ್ಥಳವಾಗಿದೆ. ಅಂತಹ ಮಾರುಕಟ್ಟೆಯ ಪರಿಸರದಲ್ಲಿ ವಿಪರೀತ ನಸಂದಣಿ ಸೇರುವುದನ್ನೇ ನೆಪ ಮಾಡಿ ದ.ಕ. ಜಿಲ್ಲಾಡಳಿತವು ಪ್ರತೀ ದಿನ ರಾತ್ರಿ 11ರಿಂದ ಮುಂಜಾನೆ 4 ಗಂಟೆಯವರೆಗೆ ಸಗಟು ವ್ಯಾಪಾರಸ್ಥರು ವ್ಯಾಪಾರ ಮಾಡಬೇಕು, ಚಿಲ್ಲರೆ ವ್ಯಾಪಾರಸ್ಥರು ಬೆಳಿಗ್ಗೆ 7ರಿಂದ 12  ರವರೆಗೆ ವ್ಯಾಪಾರ ಮಾಡಬೇಕೆಂದು ತೀರ್ಮಾನಿಸಿತು. ಬಳಿಕ ಒಂದೇ ದಿನದ ಪರಿಸ್ಥಿತಿಯನ್ನು ನೋಡಿ, ಮೊದಲೇ ಕೇಂದ್ರ  ಮಾರುಕಟ್ಟೆಯ ಬಗ್ಗೆ ಪೂರ್ವಾಗ್ರಹ ಹೊಂದಿದ್ದ ಜಿಲ್ಲಾಡಳಿತವು ಸಾಮಾಜಿಕ ಅಂತರದ ಪ್ರಶ್ನೆಯನ್ನು ಮುಂದಿಟ್ಟು ಅಲ್ಲಿನ ವ್ಯಾಪಾರಸ್ಥರೊಂದಿಗೆ ಯಾವುದೇ ರೀತಿಯಲ್ಲಿ ಚರ್ಚಿಸದೆ, ಕನಿಷ್ಠ ಮುನ್ಸೂಚನೆಯನ್ನುಕೂಡ ಕೊಡದೆ ಏಕಾಏಕಿಯಾಗಿ ಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆಯನ್ನು ಕೊಟ್ಟಿತು. ಕೇಂದ್ರ ಮಾರುಕಟ್ಟೆಯಲ್ಲಿ ಸಗಟು, ಚಿಲ್ಲರೆ ವ್ಯಾಪಾರಸ್ಥರು ಸೇರಿದಂತೆ ಬಟ್ಟೆ, ಎಲೆಕ್ಟ್ರಾನಿಕ್ಸ್, ದಿನಸಿ ಅಂಗಡಿಗಳ ವ್ಯಾಪಾರಸ್ಥರು ಇದ್ದರೂ ಅವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಜಿಲ್ಲಾಡಳಿತವು, ಎಪ್ರಿಲ್ 2ರಿಂದ 14 ರವರೆಗೆ ಸಗಟು ವ್ಯಾಪಾರಸ್ಥರು ಮಾತ್ರ ತಮ್ಮ ವ್ಯಾಪಾರವನ್ನುತಾತ್ಕಾಲಿಕ ನೆಲೆಯಲ್ಲಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಬೇಕೆಂದು ಆದೇಶ ಹೊರಡಿಸಲಾಯಿತು. ಉಳಿದ ಚಿಲ್ಲರೆ ವ್ಯಾಪಾರಸ್ಥರು ಶಾಪ್‌ಗಳ ಬಗ್ಗೆ ಯಾವುದೇ ಚಕಾರವನ್ನುಎತ್ತಲಿಲ್ಲ. ಬಳಿಕ ಕಾಟಾಚಾರಕ್ಕೆ ವ್ಯಾಪಾರಸ್ಥರ ಸಭೆಯನ್ನು ಆಯೋಜಿಸಿ ಜಿಲ್ಲಾಡಳಿತದ ತೀರ್ಮಾನವನ್ನು ಹೇರಿದ್ದರೇ ಹೊರತು ವ್ಯಾಪಾರಸ್ಥರ ಅಹವಾಲಿಗೆ ಸ್ಪಂದಿಸಲಿಲ್ಲ. ಬಳಿಕ ಸಂಸದರು, ಶಾಸಕರ ಸಮಕ್ಷಮದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಸಭೆ ನಡೆದು, ಯಾವುದೇ ಕಾರಣಕ್ಕೂಕೇಂದ್ರ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಬಾರದು, ನೂತನ ಕಟ್ಟಡದ ಪ್ರಕ್ರಿಯೆ ಪ್ರಾರಂಭವಾಗುವ ವರೆಗೆ ಈ ಹಿಂದಿನ ಕಟ್ಟಡದಲ್ಲೇ ಕಾರ‍್ಯಾಚರಿಸಲು ಅವಕಾಶ ನೀಡಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದಾಗ, ಸಂಸದರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಮಾರುಕಟ್ಟೆಯ ನೂತನ ಕಟ್ಟಡದ ಪ್ರಸ್ತಾಪವನ್ನು ಮುಂದಿಟ್ಟರು. ಒಟ್ಟಿನಲ್ಲಿ ಸಂಸದರು ಶಾಸಕರು ಇಲ್ಲಿಯವರೆಗೆ ಅಧಿಕೃತವಾಗಿ ಕೇಂದ್ರ ಮಾರುಕಟ್ಟೆಯ ನೂತನ ಕಟ್ಟಡದ ಯೋಜನೆಯ ಬಗ್ಗೆ ಬಹಿರಂಗ ಹೇಳಿಕೆಯನ್ನು ಕೊಡದೆ, ಕೇವಲ ಕೊರೋನಾ ನೆಪದಲ್ಲಿ, ಸಾಮಾಜಿಕ ಅಂತರವನ್ನು ಕಾಪಾಡುವ ಹೆಸರಿನಲ್ಲಿಈಗಿರುವ ಕೇಂದ್ರ ಮಾರುಕಟ್ಟೆಯನ್ನೇ ಇನ್ನಿಲ್ಲವಾಗಿಸಲು ಹೊರಟಿದ್ದಾರೆ. 4-5  ದಿನಗಳಲ್ಲಿ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರ ಸಭೆಯನ್ನು ಕರೆಯುವುದಾಗಿ ವಾಗ್ದಾನವಿತ್ತ ಸಂಸದರು, 21 ದಿನಗಳು ಕಳೆದರೂ ಈ ಬಗ್ಗೆ ದಿವ್ಯಮೌನ ವಹಿಸಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿದೆ.

ಕಳೆದ 2 ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ಪ್ರತಿಯೊಬ್ಬರ ಬದುಕು ತೀರಾ ಸಂಕಷ್ಟದಲ್ಲಿದ್ದು, ವ್ಯಾಪಾರಸ್ಥರು ಕೂಡಾ ಅದರಿಂದ ಹೊರತಾಗಿಲ್ಲ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ 598 ವ್ಯಾಪಾರಸ್ಥರನ್ನು ಒಳಗೊಂಡ ಕೇಂದ್ರ ಮಾರುಕಟ್ಟೆಯನ್ನುಕೊರೋನಾದ ಹೆಸರಿನಲ್ಲಿ ಹಾಗೂ ನವೀಕರಣದ ನೆಪದಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಬೀದಿಪಾಲು ಮಾಡಿರುವುದು ಸರ್ವಥಾ ಸರಿಯಲ್ಲ.
ಈ ಬಗ್ಗೆ ಜಿಲ್ಲಾಡಳಿತವು ತುರ್ತು ಗಮನ ಹರಿಸಿ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರಕ್ಕೆತೀರಾ ಅನಾನುಕೂಲವಾಗಿರುವ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ಸಗಟು ವ್ಯಾಪಾರವನ್ನು ಮುಂದುವರಿಸುವ ಇರಾದೆಯನ್ನು ತಕ್ಷಣಕೈ ಬಿಡಬೇಕು, ನಗರದ ಹೃದಯ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯ ಕಟ್ಟಡದಲ್ಲೇ, ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು, ವೈಜ್ಞಾನಿಕ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕವಷ್ಟೇ ನೂತನಕಟ್ಟಡದ ಕಾರ್ಯಕ್ಕೆ ಮುಂದಾಗಬೇಕು ಹಾಗೂ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸುಮಾರು 50 ಲಕ್ಷ ರೂ.ಯಷ್ಟು ನಷ್ಟವಾಗಿದ್ದು, ಸಂತ್ರಸ್ತಗೊಂಡ ವ್ಯಾಪಾರಸ್ಥರಿಗೆ ಕೂಡಲೇ ಪರಿಹಾರವನ್ನು ಘೋಷಿಸಬೇಕೆಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಹಾಗೂ ನ್ಯೂ ಸೆಂಟ್ರಲ್ ಮಾರ್ಕೆಟ್ ಶಾಪ್‌ ಓನರ‍್ಸ್ ಎಸೋಸಿಯೇಶನ್ (ರಿ) ಉಭಯ ಸಂಘಟನೆಗಳು ಜಂಟಿಯಾಗಿ ಒತ್ತಾಯಿಸಿದೆ. ಇಲ್ಲದಿದ್ದಲ್ಲಿಕೇಂದ್ರ ಮಾರುಕಟ್ಟೆಯ ಉಳಿವಿಗಾಗಿ ಈ ತಿಂಗಳ ಅಂತ್ಯದವರೆಗೆ ಪ್ರಬಲ ಹೋರಾಟವನ್ನು ಸಂಘಟಿಸುವುದಾಗಿಯೂ ಹಾಗೂ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳನ್ನು ಒಟ್ಟು ಸೇರಿಸಿ ಹೋರಾಟ ಸಮಿತಿಯನ್ನುರೂಪಿಸುವ ಮೂಲಕ ಹೋರಾಟದತೀವ್ರತೆಯನ್ನು ಹೆಚ್ಚಿಸಲಾಗುವುದುಎಂದು ಸಂಘಟನೆಗಳು ತಿಳಿಸಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English