ತುಳಸಿ ಪೂಜೆಯ ಸನಾತನ ಮಹತ್ವ

5:13 PM, Saturday, November 24th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Tulasi Poojaಮಂಗಳೂರು :ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ನಂತರ ಬರುವ ಇನ್ನೊಂದು ಹಬ್ಬ ಎಂದರೆ ಉತ್ಥಾನ ದ್ವಾದಶೀ. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿಯಂದು ಈ ಪವಿತ್ರ ದಿನವನ್ನು ಹಬ್ಬವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ ಕರೆಯುವರು. ಕಾರ್ತಿಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು.

ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಆಚರಿಸಬೇಕು. ಕೆಲವು ಮನೆಗಳಲ್ಲಿ ತುಳಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ. ಶ್ರೀ ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ಶ್ರೀತುಳಸೀ ದೇವಿಗೆ ಶ್ರೀ ಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುವುದು. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಳಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸೀ ವಿವಾಹವನ್ನು ಮಾಡುವರು. ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಳಸೀ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು. ತುಳಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆತನ ತುಲಾಭಾರದಲ್ಲಿ ಒಂದೆಸಳು ತುಳಸಿಯನ್ನು ಇಡಲು ಆ ಕಡೆಗೇ ತಕ್ಕಡಿ ವಾಲಿತ್ತೆಂದು ಕಥೆಯಿದೆ. ಭಕ್ತೆ ಮೀರಾಳನ್ನೂ ತುಳಸಿಯೆಂದು ಉದಹರಿಸಿರುವುದುಂಟು.

ತುಳಸಿಯಲ್ಲಿ ಎರಡು ವಿಧಗಳಿವೆ. ಒಂದು ಕೃಷ್ಣ (ಕಪ್ಪು ಬಣ್ಣ) ತುಳಸಿಯಾದರೆ ಮತ್ತೊಂದು ಶ್ರೀ ತುಳಸಿ (ಹಸುರು ಬಣ್ಣ). ತುಳಸಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಿಂದೂ ಸಂಪ್ರದಾಯದ ಮನೆಗಳ ಮುಂಭಾಗದಲ್ಲಿ ತುಳಸಿಗಿಡ ಇರುವುದು ಸಾಮಾನ್ಯದ ದೃಶ್ಯ. ಅದಕ್ಕೆಂದೇ ಒಂದು ಪ್ರತ್ಯೇಕ ಮಂಟಪದಂತಹ ಕಟ್ಟೆಯನ್ನು ಕಟ್ಟಿರುತ್ತಾರೆ. ಹಲವು ತುಳಸೀ ಗಿಡಗಳಿರುವ ಉದ್ಯಾನವನಕ್ಕೆ ತುಳಸೀವನವೆಂದೂ ಹೆಸರಿಸುವರು. ತುಳಸಿ ಇರುವ ಸ್ಥಳದಲ್ಲಿ ದೇವರಿರುವನೆಂದೂ ಪ್ರತೀತಿ. ಶೃಂಗೇರಿಯಲ್ಲಿ ತುಳಸೀವನ ಒಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ.

ಮನೆಯ ಮುಂದೆ ತುಳಸಿಗೆ ಮಾತ್ರ ಕಟ್ಟೆ ಇರಬೇಕೆಂದಿಲ್ಲ. ಎಲ್ಲ ಗಿಡಗಳಿಗೂ ಕಟ್ಟೆಗಳನ್ನು ಕಟ್ಟುವರು. ಆದರೆ ಈಗೀಗ ಜಾಗ ಸಾಲದಿರುವುದರಿಂದ, ಕೇವಲ ಕೆಲವು ಗಿಡಗಳಿಗ ಕಟ್ಟೆ ಕಟ್ಟುವರು. ಹಾಗೆ ಕಟ್ಟೆ ಕಟ್ಟುವುದರಿಂದ ನೀರು ಅತ್ತಿತ್ತ ಹೋಗುವುದಿಲ್ಲ ಮತ್ತು ಗಿಡದಿಂದ ಉದುರುವ ಹಣ್ಣೆಲೆಗಳು ಗೊಬ್ಬರದಂತೆ ಅದರಲ್ಲಿಯೇ ಉಳಿದು ಗಿಡದ ಬೆಳವಣಿಗೆಗೆ ಅನುಕೂಲವಾಗುವುದು. ನಮ್ಮ ಊರಿನ ಮನೆಯಲ್ಲಿ ತೆಂಗಿನ ಗಿಡಕ್ಕೂ ಕಟ್ಟೆ ಕಟ್ಟಿದ್ದೀವಿ. ಆದರೆ ಮುಂದೆ ಅದರ ಬೇರು ಬಹಳ ಅಗಲವಾಗಿ ಮತ್ತು ಆಳವಾಗಿ ಬೆಳೆಯುವುದರಿಂದ ಕಟ್ಟೆ ಒಡೆಯುವ ಸಂಭವ ಹೆಚ್ಚು. ವಿಷ್ಣುವನ್ನು ಎಚ್ಚರಿಸಲು ತ್ರಿಮೂರ್ತಿ ಪತ್ನಿಯರು ಮೂರು ಬೀಜಗಳನ್ನು ಎರಚಿದರು. ಮೊದಲನೆಯ ಬೀಜವನ್ನು ಧಾತ್ರಿ (ಸರಸ್ವತಿ) ಎರಚಿದರಿಂದ ಜನಿಸಿದವಳು ಧರಿತ್ರಿ. ರಮಾದೇವಿಯು ಎರಚಿದ ಬೀಜದಿಂದ ಜನಿಸಿದವಳು ಮಾಲತಿ ಮತ್ತು ಗೌರಿಯು ಎರಚಿದ ಬೀಜದಿಂದ ಜನಿಸಿದವಳು ತುಳಸೀ. ಮನೆಯ ಮುಂದೆ ತುಳಸಿಯೊಡನೆ ಹೂವಿನ (ಮಾಲತೀ) ಗಿಡಗಳನ್ನು ಕಟ್ಟೆಕಟ್ಟಿ ನೆಡುವರು.

ಸಾಮಾನ್ಯವಾಗಿ ಪ್ರತಿ ಹಿಂದೂ ಧರ್ಮೀಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ತುಳಸಿ ಪೂಜಾರ್ಹ ಪವಿತ್ರ ಗಿಡ. ತುಳಸಿಯನ್ನು ಸಾವಿರಾರು ವರ್ಷಗಳಿಂದ ಪೂಜಿಸುತ್ತಾ, ಸೇವಿಸುತ್ತಾ ಬಂದಿದ್ದೇವೆ. `ತು’ ಎಂದರೆ ಮೃತ್ಯು, `ಲಸಿ’ ಎಂದರೆ ಧಿಕ್ಕರಿಸುವುದು; ಇದು ತುಳಸಿಯ ಅರ್ಥ. ಇಂಥ ಪವಿತ್ರ ತುಳಸಿಹಬ್ಬ ಅಂದರೆ ಉತ್ಥಾನ ದ್ವಾದಶಿಯನ್ನು, ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ. ಈ ಹಬ್ಬದಂದು ನೆಲ್ಲಿ ಕೊಂಬೆಯನ್ನು ತುಳಸಿ ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ, ಧಾತ್ರಿ ಎಂದರೆ ಲಕ್ಷ್ಮಿ ಎಂದರ್ಥ, ತುಳಸಿ ಎಲ್ಲಿದೆಯೊ, ಅಲ್ಲಿ ಹರಿ ಸನ್ನಿಧಾನವಿದೆ. ಹಾಗಾಗಿ ಶ್ರೀಹರಿಯ ಜೊತೆ ಲಕ್ಷ್ಮಿಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿ ಕೊಂಬೆಯನ್ನು ತುಳಸಿಯ ಜೊತೆ ನೆಡುತ್ತಾರೆ. ಉತ್ಥಾನ ದ್ವಾದಶಿಯು ಚಾತುರ್ಮಾಸದ ವ್ರತದ ಪರಿಸಮಾಪ್ತಿಯ ದಿನವೂ ಹೌದು.

ದಿನದ ಪೂಜೆಗಳಲ್ಲೂ ಶ್ರೇಷ್ಠವಾದದ್ದು ತುಳಸಿ ಪೂಜೆ. ಸಂಸ್ಕೃತದಲ್ಲಿ ತುಲಸಿ, ಸುಲಭಾ, ಸುರನಾ, ಬಹುಮಂಜರಿ, ಶೂಲಘ್ನೀ, ದೇವ ದುಂದುಬಿ, ಪಾವನೀ ವಿಷ್ಣುಪ್ರಿಯಾ, ದಿವ್ಯಾ, ಭಾರತೀ ಮುಂತಾದ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ. ತುಳಸಿಯು ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುವ ಶಕ್ತಿ ಹೊಂದಿದೆ. ಸುಗಂಧ ದ್ರವ್ಯ ಸಸ್ಯ ತುಳಸಿಯಲ್ಲಿ ಏಳು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ಶ್ರೀ ತುಳಸಿ, ಕೃಷ್ಣ ತುಳಸಿ. ಈ ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ ಎನ್ನುವುದು ತುಳಸಿಯ ಇನ್ನೊಂದು ವಿಶೇಷ.

ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ, ಕೀಟಗಳನ್ನು, ರೋಗಾಣುಗಳನ್ನು ದೂರವಿಡುತ್ತದೆ. ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತಮುತ್ತಲೂ ಇದ್ದರೆ ಸೊಳ್ಳೆಕಾಟ ಕಡಿಮೆಯಾಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಅಂದರೆ ಬ್ರಾಹ್ಮಿ ಮಹೂರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿಯಾಗಿರುತ್ತದೆ. ತುಳಸಿ ಭಾರತೀಯರ ಪಾಲಿಗೆ ಸಂಜೀವಿನಿ. ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ತುಳಸಿಯನ್ನು ಪೂಜಿಸಿ, ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪ ನಶಿಸುತ್ತದೆ ಎಂಬ ನಂಬಿಕೆಯಿದೆ. ಇಂಥ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಿ ಧನ್ಯರಾಗಲು ಒಂದು ಅವಕಾಶ.

ತುಳಸಿ ಪೂಜೆ – ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ.ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ,ಹೂವು, ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಪಟಾಕಿಯ ಮಹಾಪೂರವೇ ಜರುಗುತ್ತದೆ.

ತುಳಸಿ ಹುಟ್ಟಿದ ಕತೆ ಗೊತ್ತಾ..?

ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ.

ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ. ಇವಳೇ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾಗುತ್ತಾಳೆಂದು ಪ್ರತೀತಿಯಿದೆ.

ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ,ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು.ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಲಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಲಸಿಯನ್ನೂ ವಿಷ್ಣುವು ಮದುವೆಯಾದನು. ಪ್ರತಿ ಹಿಂದೂ ಮನೆಯಲ್ಲೂ ಒಂದು ತುಳಸಿ ಗಿಡವಿರುವುದು ವಾಡಿಕೆ. ತುಳಸಿ ಗಿಡವು ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದಲ್ಲದೆ ಅಕಾಲಿಕ ಮರಣವನ್ನು ತಡೆಯುತ್ತದೆಂದು ನಂಬಿಕೆಯಿದೆ.ತುಳಸಿ ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಹೌದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English