ಮಂಗಳೂರು :ರಾಜ್ಯದ ಬಿಜೆಪಿ ಪಕ್ಷದ ಭವಿಷ್ಯ ಸಧ್ಯಕ್ಕಂತೂ ನೆಟ್ಟಗೆ ಇಲ್ಲ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ಬಿಟ್ಟು ತನ್ನದೇ ಹೊಸ ಪಕ್ಷ ಕೆಜೆಪಿಯನ್ನು ಕಟ್ಟಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಹೊಸ ಪಕ್ಷ ಘೋಷಣೆ ಮಾಡಿರುವ ಯಡಿಯೂರಪ್ಪರ ನೂತನ ಪಕ್ಷದ ರಾಜಾಧ್ಯಕ್ಷರಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಧನಂಜಯ ಕುಮಾರ್ ನೇಮಕವಾದ ಬೆನ್ನಲ್ಲೇ ರಾಜ್ಯದ ನಾನಾ ಕಡೆ ಕೆಜೆಪಿ ಪಕ್ಷಕ್ಕೆ ನಾಯಕರ ಹುಡುಕಾಟ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಡಿಸೆಂಬರ್ ತಿಂಗಳ 9ರಂದು ಹಾವೇರಿಯಲ್ಲಿ ನಡೆಯುವ ಕೆಜೆಪಿಯ ಬೃಹತ್ ಸಮಾವೇಶ ಈ ಎಲ್ಲ ಕಸರತ್ತುಗಳಿಗೂ ವೇದಿಕೆ ನೀಡಲಿದೆ ಎನ್ನುವ ಮಾತುಗಳು ಕೇಳಿಸಿಕೊಳ್ಳಲು ಆರಂಭವಾಗಿದೆ.
ಈ ಸಮಾವೇಶದ ಮೂಲಕ ಯಡಿಯೂರಪ್ಪ ಬರೀ ಪಕ್ಷ ಕಟ್ಟುವ ಜತೆಯಲ್ಲಿ ರಾಜ್ಯ ಸರಕಾರವನ್ನೇ ಬೀಳಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಅದಕ್ಕಾಗಿ ಬಿಜೆಪಿಯ ಹಿರಿಯ ನಾಯಕರು ರಾಜ್ಯದ ಸಚಿವರಿಗೆ ಈಗಾಗಲೇ ಸಮಾವೇಶಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದು, ಸಮಾವೇಶದಲ್ಲಿ ಭಾಗವಹಿಸಿದ ಸಚಿವರನ್ನು ಬಿಜೆಪಿಯಿಂದಲೇ ಕಿತ್ತು ಹಾಕುವ ರಣತಂತ್ರ ಕೂಡ ಸಿದ್ಧವಾಗಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಸರಕಾರ ಮತ್ತೆ ಅಡಕತ್ತರಿಯಲ್ಲಿ ಕೂತಿದೆ ಎನ್ನುವುದಕ್ಕೆ ಯಾವುದೇ ಗೊಂದಲಗಳಿಲ್ಲ. ಮಾಜಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಚಿವರು ಈ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. ಮತ್ತೊಂದೆಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಅವಕಾಶವಂಚಿತ ನಾಯಕರನ್ನು ಹುಡುಕಾಡಿಕೊಂಡು ಅವರಿಗೆ ಕೆಜೆಪಿಯ ಮೂಲಕ ಅವಕಾಶ ನೀಡುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ.
ಈ ಎಲ್ಲ ಕಾರ್ಯಕ್ಕೂ ಮೊದಲು ಕೆಜೆಪಿ ಪಕ್ಷ ರಾಜ್ಯದ ನಾನಾ ಕಡೆ ತಲೆ ಎತ್ತಲು ಜಿಲಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹಾವೇರಿಯಲ್ಲಿ ನಡೆಯುವ ಕೆಜೆಪಿ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎನ್ನುವ ಗುಪ್ತಮಾಹಿತಿ ಕೂಡ ಹೊರಬಿದ್ದಿದೆ. ಇದರ ಪ್ರಕಾರ ಕೆಜೆಪಿಯ ರಾಜಾಧ್ಯಕ್ಷರಾಗಿರುವ ಧನಂಜಯ್ ಕುಮಾರ್ ಅವರ ಆಪ್ತ ವಲಯದ ಮಂದಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಕರಾವಳಿಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಕೆಜೆಪಿಯ ಜಿಲ್ಲಾಧ್ಯಕ್ಷರಾಗಿ ಪುತ್ತೂರು ಕೋಡಿಂಬಾಡಿಯ ಬಾಲಕೃಷ್ಣ ಬೋರ್ಕರ್ ಅವರ ಹೆಸರು ಮೊದಲ ಪಟ್ಟಿಯಲ್ಲಿದೆ. ಈ ಹಿಂದೆ ಬಾಲಕೃಷ್ಣ ಬೋರ್ಕರ್ ಹಾಗೂ ಧನಂಜಯ್ ಕುಮಾರ್ ಬಹಳ ಹತ್ತಿರದ ಒಡನಾಟ ಇಟ್ಟುಕೊಂಡವರು. ಬಿಜೆಪಿ ಪಕ್ಷದಲ್ಲಿದ್ದುಕೊಂಡು ಗ್ರಾ.ಪಂ., ತಾ.ಪಂ ಸೇರದಂತೆ ಜಿ.ಪಂ.ನಲ್ಲೂ ನಾನಾ ಹುದ್ದೆಗಳನ್ನು ಪಡೆದುಕೊಂಡು ಕೊನೆಗೆ ರಾಮಭಟ್ಟರ ಸ್ವಾಭಿಮಾನಿ ಪಕ್ಷಕ್ಕೆ ಸೇರಿಕೊಂಡಿದ್ದ ಬಾಲಕೃಷ್ಣ ಬೋರ್ಕರ್ ಕೆಲವು ವರ್ಷಗಳಿಂದ ಸಕ್ರೀಯ ರಾಜಕಾರಣದಿಂದಲೇ ದೂರ ಉಳಿದುಬಿಟ್ಟಿದ್ದರು. ಈಗ ಕೆಜೆಪಿಗೆ ಸೇರುವ ಮೂಲಕ ಬಾಲಕೃಷ್ಣ ಬೋರ್ಕರ್ ರಾಜಕಾರಣಕ್ಕೆ ರೀ ಎಂಟ್ರಿ ಕೊಡುವ ಸಾಧ್ಯತೆಗಳು ಜಾಸ್ತಿಯಾಗಿದೆ ಎನ್ನಲಾಗುತ್ತಿದೆ. ಆದರೆ ಯಡಿಯೂರಪ್ಪರ ಆಪ್ತ ವಲಯದ ನಾಯಕರ ಹೆಸರು ಕೂಡ ಕೊನೆಕ್ಷಣದಲ್ಲಿ ಕಾಣಿಸಿಕೊಂಡರೂ ವಿಶೇಷವೇನಿಲ್ಲ.
ಹಾಲಾಡಿ ಕೆಜೆಪಿಗೆ ಹೋಗುತ್ತಾರಾ..?
ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಗೊಂದು ತನ್ನದೇ ಆದ ವೈಯಕ್ತಿಕ ವರ್ಚಸ್ಸಿನಿಂದ ಖದರ್ ನ್ನು ತಂದು ಕೊಟ್ಟ ಮಾಜಿ ಶಾಸಕ ಇದೀಗ ಬಿಜೆಪಿಯಿಂದ ಗಾವುದ ದೂರವಾಗಿ ಹಲವು ದಿನಗಳು ಕಾಲನ ಗರ್ಭದಲ್ಲಿ ಕರಗಿ ಹೋಗಿದ್ದು ಇದೀಗ ಇತಿಹಾಸ. ತದನಂತರ ಸ್ಪರ್ಧೆಗೆ ಬಿದ್ದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅವರನ್ನು ತಮ್ಮತ್ತ ಸೆಳೆಯಲು ಶತಾಯಗತಾಯ ಯತ್ನಿಸಿದರೂ ಎಲ್ಲರಿಗೂ ಮುಗುಳ್ನಗೆ ಯಿಂದಲೇ ಉತ್ತರಿಸಿದ ಹಾಲಾಡಿಯ ವರ ಮೌನ ಮಾತ್ರ ಚಿದಂಬರ ರಹಸ್ಯ ವಾಗಿಯೇ ಉಳಿದಿತ್ತು. ಇದರ ನಡುವೆ ಬಿಜೆಪಿಯ ವರಿಷ್ಠರ ಸಹಿತ ಬಿಜೆಪಿಯ ರಿಮೋಟ್ ಕಂಟ್ರೋಲರ್ ಎನ್ನಲಾದ ಕಲ್ಲಡ್ಕದ ಭಟ್ಟರೂ ಸಹಾ ಹಾಲಾಡಿಯ ತನಕ ಪಾದ ಬೆಳೆಸಿ ಕುಶಲ ವಿಚಾರಿಸಿದರೂ ಕ್ಯಾರೇ ಎನ್ನದ ಹಾಲಾಡಿ ತಾನು ಕಟ್ಟಿದ ಮನೆಯೇ ತನ್ನ ಪಾಲಿಗೆ ಇಲ್ಲವಾದ ನೋವನ್ನು ತನ್ನ ದೃಢ ನಿರ್ಧಾರದಿಂದ ರಾಯಭಾರ ಹೊತ್ತು ಬಂದವರಿಗೆ ಸದ್ದಿಲ್ಲದೆ ಕಪಾಳಮೋಕ್ಷ ಮಾಡಿದರು.
ಒಂದೊಮ್ಮೆ ಸಭೆಯಲ್ಲಿ ಹಾಲಾಡಿಯವರೇ ಹೇಳಿದ ಹಾಗೆ, `ಸ್ಮಶಾನ ಅನ್ನುವುದು ಎಲ್ಲರಿಗೂ ಬೇಕು. ಆದರೆ ಅದು ನಮ್ಮ ಹತ್ತಿರ ಇರಬಾರದು. ಅಂತಹದ್ದೇ ಸ್ಥಿತಿ ಇದೀಗ ಕಾಂಗ್ರೆಸ್ನ ವರದ್ದಾಗಿದೆ. ಕುಂದಾಪುರ ಕಾಂಗ್ರೆಸ್ ಕ್ಷೇತ್ರದ ಸೋಲಿಲ್ಲದ ಸರದಾರನೆಂಬ ಮಾಜಿ ಬಿರುದಾಂಕಿತ ಪ್ರತಾಪ್ ಚಂದ್ರ ಶೆಟ್ಟಿ, ಯಾವಾಗ ಹಾಲಾಡಿಯವರೆದುರು ಸೋಲೊಪ್ಪಿ ತೆರೆಮರೆಯ ಪುಡಾರಿಯಾಗಿ ಬಿಟ್ಟರೋ ಅಂದಿನಿಂದ ಕುಂದಾಪುರ ಕ್ಷೇತ್ರಕ್ಕೆ ನಾವಿಕನಿಲ್ಲದ ನಾವೆಯಂತಾಗಿ ಹೋಗಿತ್ತು ಕಾಂಗ್ರೆಸ್ನ ಸ್ಥಿತಿ. ಎಲ್ಲಿ ತನಕ ಹಾಲಾಡಿ ಬಿಜೆಪಿಯಲ್ಲಿರುತ್ತಾರೋ ಅಲ್ಲಿ ತನಕ ಬಿಜೆಪಿಯನ್ನು ಅಲ್ಲಾಡಿಸುವುದು ಭ್ರಮೆಯೇ ಸರಿ ಎಂಬುದೇ ಕಾಂಗ್ರೆಸ್ನ ದೃಢನಂಬಿಕೆಯಾಗಿತ್ತು. ಆದರೆ ಹಾಲಾಡಿಯವರೀಗ ಬಿಜೆಪಿಗೆ ಬೆನ್ನು ತಿರುಗಿಸಿರುವುದರಿಂದ ಸ್ಪರ್ದೆ ನೀಡಿ ಗೆಲ್ಲಿಸಬಹುದೆಂಬ ದೂರದ ಆಸೆ ಕಾಂಗ್ರೆಸ್ನ ಪಡಸಾಲೆಯಲ್ಲಿ ಎದುಸಿರು ಬಿಡುತ್ತಿದೆ. ಆದರೆ ಅದೇ ಹಾಲಾಡಿಯವರು ಕಾಂಗ್ರೆಸ್ಗೆ ಬಂದರೆ, ನಾವು ಇಷ್ಟು ವರ್ಷಗಳಿಂದ ಕಾಂಗ್ರೆಸ್ ನೊಗ ಹೊತ್ತಿದ್ದು, ಸುಖಾಸುಮ್ಮನೆ ಆಗಿ ಹೋಗಿ ಮುಂದೇನಿದ್ದರೂ ಹಾಲಾಡಿಯೆಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಹಾಲಾಡಿ ಎಂದೇ ಆಗಿ ಬಿಡುತ್ತದೆ ಎಂಬ ಆತಂಕ ಕಾಂಗ್ರೆಸ್ ಮರಿ ಪುಢಾರಿಗಳದ್ದು. ಹಾಗಾಗಿಯೇ ಹಾಲಾಡಿ ಬೇರೆಯೆಲ್ಲಿಯಾದರೂ ಹೋಗಲಿ. ಇಲ್ಲಿ ಬಂದು ನಮ್ಮನ್ನು ಮೂಲೆ ಗುಂಪಾಗಿಸುವುದು ಬೇಡ ಎಂಬ ಹರಕೆ ಕಾಂಗ್ರೆಸ್ ಉಮೇದ್ವಾರರ ಮಗ್ಗಲಿನಿಂದ ಸದ್ದುಮಾಡುತ್ತಿದೆ.
ಅಂದಹಾಗೆ ಜಯಪ್ರಕಾಶ್ ಹೆಗ್ಡೆಯವರು ಜೆಡಿಎಸ್ ನಲ್ಲಿದ್ದಾಗ ಸ್ಥಳೀಯವಾಗಿ ಒಂದಷ್ಟು ಸದ್ದು ಮಾಡಿದ ಜೆಡಿಎಸ್, ಅವರು ಕಾಂಗ್ರೆಸ್ನ ಕೋಟೆಯತ್ತ ಸಾಗುತ್ತಲೇ ರಾಗಿ ಜೇನು ಇಲ್ಲದಂತಹ ಬಂಜರು ಗೂಡಿನಂತಾಗಿ ಬಿಟ್ಟಿತು. ಮಂಜಯ್ಯ ಶೆಟ್ಟಿ, ಅಲೆಕ್ಸಾಂಡರ್, ಚೆರಿಯಬ್ಬ, ಜಗದೀಶ್ ಯಡಿಯಾಳ್ನಂತವರು ಜೆಡಿಎಸ್ ನಲ್ಲಿದ್ದರೂ ಅವರ್ಯಾರು ಎನ್ನುವುದು ಅವರ ಪಕ್ಕದ ಮನೆಯವರಿಗೂ ಗೊತ್ತಿಲ್ಲ ಎನ್ನುವಂತಹ ಸ್ಥಿತಿ ಕುಂದಾಪುರ ಜೆಡಿಎಸ್ ನದ್ದು. ಹಾಗಾಗಿಯೇ ಜೆಡಿಎಸ್ ಗೆ ಸ್ಥಳೀಯವಾಗಿ ಪಾಳೇಗಾರನೋರ್ವನ ಅವಶ್ಯಕತೆಯಿದೆ. ಹಾಲಾಡಿಯವರಿಗಾದ ನೋವಿನ ನೆಪದಲ್ಲಿ ಬಿಜೆಪಿಯಿಂದ ಬೇರ್ಪಟ್ಟ ನಾಗರಾಜ ಶೆಟ್ಟಿ ನೇರವಾಗಿ ಅಪ್ಪಿಕೊಂಡಿದ್ದು ತೆನೆ ಹೊತ್ತ ಮಹಿಳೆಯನ್ನು. ಒಳ ತುಮುಲಗಳೇನೇ ಇರಲಿ, ಅವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದ ಜೆಡಿಎಸ್, ಅಂಥಹದ್ದೇ ದಾಳವನ್ನು ಕುಂದಾಪುರದಲ್ಲಿಯೂ ಉರುಳಿಸಿದೆ. ಅಳೆದು ತೂಗಿ ಹಾಲಾಡಿಯವರು ಕೂಡ ತಮ್ಮ ಮೌನ ಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆನ್ನುವ ಸುದ್ದಿಯೂ ಕೆಲವು ನಂಬಲಾರ್ಹ ಮೂಲಗಳಿಂದ ಕೇಳಿ ಬಂದಿತ್ತು.
ಆದರೆ ಇಂತಹ ದಾಳವನ್ನು ಯಡಿಯೂರಪ್ಪರ ನೂತನ ಪಕ್ಷ ಕೆಜೆಪಿಗೆ ಎಳೆಯಲು ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಆದರೆ ಈ ಕುರಿತು ಹಾಲಾಡಿ ಮೌನಕ್ಕೆ ಶರಣು ಎಂದಿದ್ದಾರೆ. ಟೋಟಲಿ ಕೆಜೆಪಿಯ ಮುಂದಿನ ಅಧ್ಯಾಯದಲ್ಲಿ ಹಾಲಾಡಿ ಪುಟವೊಂದು ಸೇರಿಕೊಳ್ಳುವ ಸಾಧ್ಯತೆಗಳು ಇಲ್ಲ ಎನ್ನುವಂತಿಲ್ಲ. ಇದರ ಬೆನ್ನಿಗೆ ಬೈಂದೂರು ಶಾಸಕ ಲಕ್ಷ್ಮಿ ನಾರಾಯಣ ಕೂಡ ಕೆಜೆಪಿಯ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತುಗಳಿವೆ. ಈ ಹಿಂದೆ ನಾನಾ ಪಕ್ಷದಲ್ಲಿ ದುಡಿದಿದ್ದ ಲಕ್ಷ್ಮೀ ನಾರಾಯಣ ಮುಂದಿನ ಚುನಾವಣೆಗೆ ಯಡ್ಡಿ ಪಕ್ಷದಲ್ಲಿ ಜಾಗ ಖರೀದಿಸುವ ಸೂಚನೆಗಳಿಗೆ ಒತ್ತು ನೀಡುವಂತೆ ತೀರಾ ಇತ್ತೀಚೆಗೆ ಮಾಜಿ ಸಿಎಂ ಯಡ್ಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನುವ ಮಾತು ಹೊರಬಿದ್ದಿದೆ. ಈ ಎಲ್ಲ ಕಾರಣಗಳಿಂದ ಕೆಜೆಪಿ ಪಕ್ಷ ಮೊದಲು ಕುಂದಾಪುರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ನಂತರ ಉಡುಪಿ ಹಾಗೂ ದಕ್ಷಿಣ ಕನ್ನಡದ ಕಡೆ ಪ್ರಯಾಣ ಬೆಳೆಸುವ ಲೆಕ್ಕಚಾರ ಇಟ್ಟುಕೊಂಡು ಮುಂದುವರಿಯುತ್ತಿದೆ ಎನ್ನುವ ಮಾತು ಚಾಲ್ತಿಗೆ ಬಂದಿದೆ. ಈ ಮೂಲಕ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಯಾವ ನಾಯಕರು ಕೆಜೆಪಿಗೆ ಬಂದು ಸೇರುತ್ತಾರೋ ಕಾದು ನೋಡಬೇಕಾದ ಪರಿಸ್ಥಿತಿ ಮತದಾರ ಮಹಾಪ್ರಭುವಿಗೆ ಬಂದು ಬಿಟ್ಟಿದೆ.
Click this button or press Ctrl+G to toggle between Kannada and English