ಎಸ್ಸೆಸ್ಸೆಲ್ಸಿ ಪರೀಕ್ಷೆ ಏಕೆ ರದ್ದುಗೊಳಿಸಬೇಕು ? ಇಲ್ಲಿವೆ ಉತ್ತರಗಳು

11:32 AM, Tuesday, May 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sslc examಹುಬ್ಬಳ್ಳಿ: ಒಂದೆಡೆ ಕೊರೋನಾ ಭೀತಿಯಿಂದ ಇಡೀ ರಾಜ್ಯವೇ ಲಾಕ್‌ ಡೌನ್‌ ನಲ್ಲಿಯೇ ಎರಡು ತಿಂಗಳು ಕಾಲ ಕಳೆದಿದೆ. ಈಗ ವಿದ್ಯಾರ್ಥಿಗಳ ಭವಿಷ್ಯದ ಮುಂದಿನ ಭದ್ರ ಬುನಾದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಂದು ಬಾರಿ ಮುಂದೂಡಲಾಗಿತ್ತು. ನಂತರ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಮತೆಯೇ ಸವಾಲಾಗಿತ್ತು. ಕೂಡಲೇ ಎಚ್ಚೆತ್ತ ಸರಕಾರ ರೆಡಿಯೋ ಹಾಗೂ ಟಿವಿ ಮಾಧ್ಯಮಗಳಲ್ಲಿ ಹಲವಾರು ಪರೀಕ್ಷಾ ಪೂರ್ವ ಪದ್ಧತಿ ಹಾಗೂ ವಿದ್ಯಾಭ್ಯಾಸದ ಮನನ ಮಾಡಲಾರಂಭಿಸಿದೆ. ಅದರಂತೆ ಕೆಲವು ಶಾಲೆಗಳು ಹಾಗೂ ಟ್ಯಟೋರೀಯಲ್‌ ಗಳು ಆನಲೈನ್‌ ತರಬೇತಿ ನೀಡುತ್ತಿವೆ. ಆದರೆ ಎಳೆ ಮನಸ್ಸಿನ ಮತ್ತು ವಯಸ್ಸಿನ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಇನ್ನೂ ಪರೀಕ್ಷೆ ನಡೆಯುವುದು ಅನುಮಾನವಾಗಿಯೇ ಉಳಿದಿದೆ.

ಈ ಬಗ್ಗೆ ಕೆಲವರು ಪರೀಕ್ಷೆ ನಡೆಸಲು ಒತ್ತಾಯಿಸಿದರೆ ಕೆಲವರು ಪರೀಕ್ಷೆ ನಡೆಸುವುದೇ ಬೇಡ ಎಂದು ಅಭಿಪ್ರಾಯ ಪಡುತ್ತಿದ್ದಾರೆ.

ಈ ಕುರಿತು ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಉಪಾಧ್ಯಕ್ಷ ಬಸವರಾಜ ಗುರಿಕಾರ ಹೇಳುವುದೇನೆಂದರೆ, ಕೋವಿಡ್-‌19 ಕೊರೋನಾ ರೋಗದ ಭಯ ಮತ್ತು ಆತಂಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗದು. ಆದ್ದರಿಂದ ಈ ಬಾರಿಯ ಪರೀಕ್ಷೆಯನ್ನು ರದ್ದುಗೊಳಿಸುವುದು ಸೂಕ್ತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.

ಕೊರೋನಾ ಭಯದಿಂದ ಇಡೀ ವಿಶ್ವವೇ ನಲುಗಿ, ಹಲವಾರು ಸಾವು, ಸಾಕಷ್ಟು ಆರ್ಥಿಕ ನಷ್ಟ ಸಂಭವಿಸಿವೆ. ನಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿ ಇದೆ. ಮನೆಯಿಂದ ಹೊರಬಂದರೆ ಎಲ್ಲಿ ನಮಗೆ ಸೋಂಕು ತಗುಲುತ್ತದೆಯೋ ಎಂಬ ಭಯದಿಂದಲೇ ಜೀವನ ಸಾಗಿಸುತ್ತ ಆತಂಕದಿಂದ ಜನತೆ ತತ್ತರಿಸಿ ಹೋಗಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ ಮೆಟ್ಟಿಲಾಗಿದೆ. ಪರೀಕ್ಷೆಯಲ್ಲಿ ಪಾಸಾದ ಮತ್ತು ಪಡೆದ ಅಂಕಗಳ ಪ್ರಮಾಣ ಪತ್ರವೂ ಕೂಡ ಅತೀ ಮುಖ್ಯವಾದ ದಾಖಲಾಗುತ್ತದೆ. ರಾಜ್ಯ ಸರಕಾರವೇನೋ ಜೂನ್‌ ತಿಂಗಳಿನಲ್ಲಿ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ವೇಳಾಪಟ್ಟಿಯನ್ನೂ ಕೂಡ ಪ್ರಕಟಿಸಿದೆ.

ಆದರೆ, ಸರಕಾರಕ್ಕೆ ವಿದ್ಯಾರ್ಥಿಗಳ ಜೀವನದ ಮುಂದೆ ಪರೀಕ್ಷೆಯೇ ಅನಿವಾರ್ಯವೇ ಎಂದು ಗುರಿಕಾರ ಪ್ರಶ್ನಿಸಿದ್ದಾರೆ. ನಮ್ಮ ದೇಶದ ಪಂಜಾಬ, ಹರಿಯಾಣ ಸೇರಿದಂತೆ ಇನ್ನಿತರ ಕೆಲ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಿವೆ. ನಮ್ಮ ರಾಜ್ಯದಲ್ಲೂ ಆ ರಾಜ್ಯಗಳೊಂದಿಗೆ ಸಂಪರ್ಕಿಸಿ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ಅದೇ ಮಾದರಿಯಲ್ಲಿ ಪರೀಕ್ಷೆ ರದ್ದುಗೊಳಿಸಬೇಕು.

ಇನ್ನು ಪರೀಕ್ಷೆ ನಡೆಸಿದರೆ ಆಗುವ ಅನಾಹುತಗಳು ಅನೇಕ. ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದೇ ಎಂಬುದು ಮುಖ್ಯವಾದ ಸಂಶಯಾಸ್ಪದ ವಿಷಯವಾಗಿದೆ. ಅಲ್ಲದೇ ಇನ್ನಿತರ ಅನೇಕ ಸಮಸ್ಯೆಗಳನ್ನು ಸರಕಾರ ಸಮರ್ಥವಾಗಿ ನಿಭಾಯಿಸುವ ಸವಾಲು ಕೂಡ ಇದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ ಹಿಂದಿನ ಶೈಕ್ಷಣಿಕ ವರ್ಷದ ಪ್ರತಿಭೆ, ಕಾರ್ಯಕ್ಷಮತೆ ಆಧರಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೇ ತೇರ್ಗಡೆ ಮಾಡಬೇಕು. ಇನ್ನು ಕೆಲ ದಿನಗಳ ಹಿಂದೆ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಕೂಡ ನಡೆಸಲಾಗಿತು. ಅದರ ಉತ್ತರ ಪತ್ರಿಕೆಗಳನ್ನೆ ಪರಿಗಣಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಅರಿಯಬಹುದಾಗಿದೆ.

ಈಗಾಗಲೇ ಹಲವಾರು ಸಂಘ, ಸಂಸ್ಥೆಗಳು, ವಿವಿಧ ಸಂಘಟನೆಗಳು ಹಾಗೂ ಶೈಕ್ಷಣಿಕ ತಜ್ಞರು, ಪರಿಣಿತರು ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಸರಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಗುರಿಕಾರ ಆಗ್ರಹಿಸಿದ್ದಾರೆ.

ವಿಶೇಷ ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English