ಮಂಗಳೂರು: ಜೂನ್ ಒಂದರಿಂದ ನಿಷೇಧ ಗೊಳ್ಳಬೇಕಿದ್ದ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಅವಧಿಯನ್ನು ಜೂನ್ 14ರ ವರೆಗೆ ಮುಂದೂಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ ಅವರು ಪ್ರತಿಕ್ರಿಯಿಸಿ ‘ಮೀನುಗಾರಿಕಾ ಅವಧಿ ಮುಂದೂಡಿ ಕೇಂದ್ರ ಸರಕಾರ ಆದೇಶ ಮಾಡಿದ್ದು, ರಾಜ್ಯ ಸರಕಾರದ ಆದೇಶ ಇನ್ನಷ್ಟೇ ಬರಬೇಕಿದೆ. ಬಳಿಕ ಈ ನಿಯಮ ಅನ್ವಯವಾಗಲಿದೆ’ ಎಂದು ತಿಳಿಸಿದ್ದಾರೆ.
ಮೀನುಗಾರಿಕಾ ಇಲಾಖೆ ಋತುವಿನಂತೆ ಪಶ್ಚಿಮ ಕರಾವಳಿಯಲ್ಲಿ ಮೇ 31 ಆ ವರ್ಷದ ಮೀನುಗಾರಿಕೆಗೆ ಕೊನೆಯ ದಿನ. ಬಳಿಕ 61 ದಿನಗಳ ಕಾಲ ನಿಷೇಧ ಇರುತ್ತದೆ. ಆದರೆ ಈ ವರ್ಷ ಲಾಕ್‌ಡೌನ್ ಕಾರಣದಿಂದ ಮೀನುಗಾರರು ಅಪಾರ ನಷ್ಟ ಅನುಭವಿಸಿದ್ದರು. ಈ ಕಾರಣಕ್ಕಾಗಿ ನಿಷೇಧ ಅವಧಿಯನ್ನು ಜೂ. 14ರ ವರೆಗೆ ಮುಂದೂಡಲಾಗಿದೆ.
ಇತ್ತೀಚೆಗೆಯಷ್ಟೇ ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮತ್ತು ಸಣ್ಣ ಯಾಂತ್ರೀಕೃತ ಬೋಟ್ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು. ಆಳ ಸಮುದ್ರ ಮೀನುಗಾರಿಕೆಗೆ ಮತ್ತಷ್ಟು ದಿನ ಅವಕಾಶ ನೀಡಿದರೂ, ಮೀನುಗಾರ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಲಾಭವಾಗದು ಎನ್ನುತ್ತಾರೆ ಮೀನುಗಾರ ಮುಖಂಡರು.
Click this button or press Ctrl+G to toggle between Kannada and English