ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ಸುಮಾರು ದಶಕಗಳದು. ಈ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ. ರೈಲು ಮಾರ್ಗ ಅನುಷ್ಠಾನಕ್ಕೆ ಒಂದೆಡೆ ಹೋರಾಟ ನಡೆಸಿದರೆ ಮತ್ತೊಂದೆಡೆ ಈ ಮಾರ್ಗ ದಿಂದ ಅರಣ್ಯನಾಶವಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬುದು ಪರಿಸರವಾದಿಗಳು ವಾದಿಸುತ್ತಿದ್ದಾರೆ.
ಆದರೆ, ಇತ್ತೀಚೆಗೆ ವನ್ಯ ಜೀವಿ ಮಂಡಳಿ ಈ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಕಾಮಗಾರಿ ಆರಂಭಕ್ಕೆ ಮುನ್ನುಡಿ ಬರೆದಿದೆ.
ಇತ್ತ ರೈಲು ಮಾರ್ಗ ಆರಂಭಕ್ಕೆ ಹೋರಾಟ ನಡೆಸಿದವರಿಗೆ ಜಯವಾದರೆ, ಅತ್ತ ರೈಲು ಮಾರ್ಗ ವಿರೋಧಿಸಿದವರು ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿರುವ ಪರಿಸರವಾದಿಗಳು ಈಗ ಸಾಮಾಜಿಕ ಜಾಲತಾಣಗಳ ಮೊರೆ ಹೊಕ್ಕು ಯುವಜನತೆ ಮೂಲಕ ಹೋರಾಟವನ್ನು ಮುಂದುವರೆಸಿದ್ದಾರೆ.
ಈ ರೈಲು ಮಾರ್ಗದ ಕಾಮಗಾರಿಯಿಂದ ಪರಿಸರ, ವನ್ಯಜೀವಿಗಳ ನಾಶದೊಂದಿಗೆ ಜಲಮೂಲಕ್ಕೂ ಧಕ್ಕೆ ಬರಲಿದೆ ಎಂಬುದು ಪರಿಸರವಾದಿಗಳ ವಾದ. ಇವರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಹಿಂಬಾಲಕರೂ ಇದ್ದು, ಸಾವಿರಾರು ಜನರು ಇವರಿಗೆ ಬೆಂಬಲ ನೀಡುತ್ತಿದ್ದಾರೆ.
ರೈಲು ಮಾರ್ಗ ಯೋಜನೆ ವಿರುದ್ಧ ಸಾಮಾಜಿಕ ಜಾಲತಾಣದ ಅಭಿಯಾನದ ಬಗ್ಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ತೀವ್ರವಾಗಿ ಖಂಡಿಸಿದ್ದಾರೆ.
ಆನಂದ ಅಸ್ನೋಟಿಕರ್ ಪ್ರಕಾರ, ಪರಿಸರವಾದಿಗಳು ಆರಂಭಿಸಿದ ಈ ಅಭಿಯಾನ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ಗುಡುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನ ಆರಂಭಿಸಿದ ಪರಿಸರವಾದಿಗಳು ಅರಣ್ಯ ಕಬಳಿಸಿಕೊಂಡು ಅಡಕೆ ತೋಟ ಮಾಡಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಲಾಭ ಕೂಡ ಮಾಡಿಕೊಂಡಿದ್ದಾರೆ. ಇದೇ ರೀತಿ ಅಭಿಯಾನ ಮುಂದುವರೆಸಿದರೆ ಇವರ ವಿರುದ್ಧ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸಿ ಅವರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ನೀಡುವಂತೆ ಹೊಸ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಬಿಡುಗಡೆ ಮಾಡಿರುವ ಅಸ್ನೋಟಿಕರ್, ಹೋರಾಟ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಸುವುದಾಗಿ ಹೇಳಿದ್ದಾರೆ.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English