ಮಂಗಳೂರು :ಮಾರುತಿ ಯುವಕ ಮಂಡಲದ ರಜತ ಮಹೋತ್ಸವದ ಅಂಗವಾಗಿ ಉಳ್ಳಾಲ ಮೊಗವೀರ ಪಟ್ಣದಲ್ಲಿ ಎರಡು ದಿನಗಳ ಕಾಲ ನಡೆದ ಬೀಚ್ ಉತ್ಸವದಲ್ಲಿ ಸಮುದ್ರಕ್ಕೆ ಸವಾಲೆಸೆಯುವಂತೆ ಜನ ಸಾಗರ ಸೇರಿತ್ತು. ಮೊದಲ ದಿನವಾದ ಶನಿವಾರವೇ ಜನರಿಂದ ತುಂಬಿದ್ದ ಉಳ್ಳಾಲ ಬೀಚ್ ಗೆ ರವಿವಾರ ನಾನಾ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.
ರವಿವಾರ ಬೆಳಗ್ಗೆ ಬಲೆ ಬೀಸುವ ಸ್ಪರ್ದೆ ಹಾಗೂ ನಾಡಾದೋಣಿ ಸ್ಪರ್ಧೆಗೆ ಶಾಸಕ ಯು. ಟಿ ಖಾದರ್ ಚಾಲನೆ ನೀಡಿದರು. ಕಾರ್ಯಕ್ರಮವು ಬಲೆ ಬೀಸುವ ಸ್ಪರ್ಧೆಯೊಂದಿಗೆ ಆರಂಭವಾಯಿತು. ಬಲೆ ಬೀಸುವ ಸ್ಪರ್ಧೆಯಲ್ಲಿ ಸುಮಾರು 60 ಮಂದಿ ಸ್ಪರ್ಧಿಗಳು ತಮ್ಮ ಚಾಕ ಚಕ್ಯತೆ ಪ್ರದರ್ಶಿಸಿದರು. ಬಳಿಕ ನಡೆದ ನಾಡದೋಣಿ ಸ್ಪರ್ಧೆಯಲ್ಲಿ 15 ತಂಡ, ಈಜು ಸ್ಪರ್ಧೆಯಲ್ಲಿ 24 ಹಾಗೂ ಸ್ಯಾಂಡ್ ಆರ್ಟ್‌ನಲ್ಲಿ 5 ಸ್ಪರ್ಧಿಗಳು ಭಾಗವಹಿಸಿದ್ದರು. ಇದಲ್ಲದೆ ಮರಳು ಶಿಲ್ಪ ಸ್ಪರ್ಧೆ, ಸಂಜೆ ಗಾಳಿ ಪಟ ಉತ್ಸವ ನಡೆಯಿತು.
ಸ್ಯಾಂಡ್ ಆರ್ಟ್ ಸ್ಪರ್ಧೆಯಲ್ಲಿ ಮರಳಿನಿಂದ ತಯಾರಿಸಿದ ಕಲಾಕೃತಿಯ ಆಶಯದ ಆಧಾರದಲ್ಲಿ ಅಂಕಗಳನ್ನು ನೀಡಲಾಗಿತ್ತು. ಅಲ್ಲಿ ಕಂಡು ಬಂದ ಒಂದು ಪ್ರಮುಖ ಕಲಾಕೃತಿ ಕುಡುಕ ಗಂಡಸು ಕುಡಿತದಿಂದ ಹೊರ ಬರುವಂತೆ ಸ್ತ್ರೀಯು ಒತ್ತಾಯಿಸುತ್ತಿರುವುದು ಪ್ರೇಕ್ಷಕರ ಮನಸೆಳೆಯಿತು.
ಅಧಿಕ ಜನರ ಆಗಮನದಿಂದಾಗಿ ವಾಹನ ಸಂಚಾರಕ್ಕೆ ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾದುದರಿಂದ ಜನರು ಹೆದ್ದಾರಿಯಿಂದಲೇ ನಡೆದುಕೊಂಡು ಹೋಗಬೇಕಾಯಿತು. ಎರಡು ದಿನಗಳ ಕಾಲ ನಡೆದ ಬೀಚ್ ಉತ್ಸವವು 30 ಲಕ್ಷ ರೂಪಾಯಿ. ಖರ್ಚು ವೆಚ್ಚಗಳೊಂದಿಗೆ ಅದ್ಧೂರಿಯಾಗಿ ನಡೆಯಿತು ಈ ಸಂದರ್ಭ ಉಳ್ಳಾಲ ಬೀಚ್‌ಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Click this button or press Ctrl+G to toggle between Kannada and English