ಪಕ್ಷಾಂತರ ಕಾಯಿದೆ ಮತ್ತಷ್ಟು ಬಲಗೊಳಿಸಲು ಸರ್ವಪಕ್ಷಗಳ ಸದಸ್ಯರಿಂದ ಒಮ್ಮತದ ಅಭಿಪ್ರಾಯ

9:48 PM, Thursday, May 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

Joshiಬೆಂಗಳೂರು : ದೇಶದ ರಾಜಕಾರಣದಲ್ಲಿ ಪಕ್ಷಾಂತರ ಎಂಬುದು ಪೆಡಂಬೂತವಾಗಿ ಕಾಡುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಕಳವಳಕಾರಿ ವಿಷಯವಾಗಿದೆ ಹಾಗೂ ಇದು ರಾಷ್ಟ್ರ ಮಟ್ಟದ ಚಿಂತನೆಯ ವಿಷಯವಾಗಿದ್ದು, ಈ ಪಕ್ಷಾಂತರ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಲೋಕಸಭಾಧ್ಯಕ್ಷರು ಹಾಗೂ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಅಧ್ಯಕ್ಷರಾದ ಓಂ ಬಿರ್ಲಾ ಅವರು ರಾಜಸ್ಥಾನದ ವಿಧಾನಸಭಾಧ್ಯಕ್ಷ ರಾದ ಡಾ. ಸಿ.ಪಿ.ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು ಅದರ ಸದಸ್ಯರಾಗಿರುವ ತಮಗೆ ಪಕ್ಷಾಂತರ ಕಾಯಿದೆ ಬದಲಾವಣೆ ಅಂಶಗಳ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಪಕ್ಷಾಂತರ ಕಾಯಿದೆಯ ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳು ಹಾಗೂ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಕುರಿತು ಸಂಸದೀಯ ಗಣ್ಯರುಗಳೊಂದಿಗೆ ಇಂದು ವಿಧಾನಸೌಧದಲ್ಲಿ ಸಭಾಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷಾಂತರ ಕಾಯಿದೆ ಕುರಿತು 1967 ರಲ್ಲಿ ಮೊಟ್ಟ ಮೊದಲ ಭಾರಿಗೆ ಲೋಕಸಭೆಯಲ್ಲಿ ತಮ್ಮ ನಿರ್ಣಯವನ್ನು ಮಂಡಿಸಿದ್ದರು, ಕಾಲನಂತರದಲ್ಲಿ 1985 ರಲ್ಲಿ 52ನೇ ತಿದ್ದುಪಡಿ ತರುವ ಮೂಲಕ ಪಕ್ಷಾಂತರ ಅಧಿನಿಯಮವನ್ನು ಜಾರಿಗೆ ತರಲಾಯಿತು. ಬದಲಾದ ರಾಜಕೀಯ ಸನ್ನಿವೇಶಕ್ಕನುಗುಣವಾಗಿ 91ನೇ ತಿದ್ದುಪಡಿಯ ಅಧಿನಿಯಮ ಮೂಲಕ ಸಂವಿಧಾನದ 10ನೇ ಅನುಸೂಚಿಯನ್ನು ಇನ್ನಷ್ಟು ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ರಾಜಕೀಯ ಆಸಕ್ತಿವುಳ್ಳ ಸಾರ್ವಜನಿಕರಿಂದ ಸಹ ಪಕ್ಷಾಂತರ ಕಾಯಿದೆ ಕುರಿತ ಬದಲಾವಣೆಗಳ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಜೂನ್ 10ರ ವರೆಗೆ ಅವಕಾಶ ನೀಡಲಾಗಿದ್ದು, ಜನ ಪ್ರತಿನಿಧಿಗಳಿಂದ ಸಹ ಸಲಹೆ ಸೂಚನೆಗಳನ್ನು ಪಡೆಯಲು ಸಭೆಯನ್ನು ಕರೆಯಲಾಗಿದ್ದು, ಪಕ್ಷಬೇಧ ಮರೆತು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಆರೋಗ್ಯಕರ ಜನತಾಂತ್ರಿಕ ವ್ಯವಸ್ಥೆಗೆ ಪಕ್ಷಾಂತರ ಒಂದು ಶಾಪ. ಅರವತ್ತರ ದಶಕದಲ್ಲಿ ಆರಂಭಗೊಂಡ ಪಕ್ಷಾಂತರ ಪಿಡುಗಿನ ಪರಿಣಾಮ ಭಾರತದ ಉದ್ದಗಲಕ್ಕೂ ಅನೇಕ ಸರ್ಕಾರಗಳು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದ ರಾಜಕೀಯ ಪಕ್ಷಗಳು ತಮ್ಮ ತಾಳಕ್ಕೆ ಕುಣಿಯದ ರಾಜ್ಯ ಸರ್ಕಾರಗಳನ್ನು ಪಕ್ಷಾಂತರಕ್ಕೆ ಪ್ರಚೋದನೆ ನೀಡುವ ಮೂಲಕ ಉರುಳಿಸುತ್ತಿದ್ದುದು ಸಾಮಾನ್ಯ ರಾಜಕೀಯ ಪ್ರಕ್ರಿಯೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯಕರ ಜನ ತಾಂತ್ರಿಕ ವ್ಯವಸ್ಥೆಯನ್ನು ಕಾಪಾಡಲು ಸಂವಿಧಾನದ 1985 ರಲ್ಲಿ 52 ನೇ ತಿದ್ದುಪಡಿ ಮೂಲಕ 10 ನೇ ಅನುಸೂಚಿ ಅನ್ವಯ ರಾಜೀವ ಗಾಂಧೀ ಸರ್ಕಾರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತು. ಇದು ವಿವಿಧ ರಾಜ್ಯಗಳಲ್ಲಿ ಸುಭದ್ರ ಸರ್ಕಾರಗಳನ್ನು ಸ್ಥಾಪಿಸುವುದಕ್ಕೆ ಅರ್ಥಪೂರ್ಣ ಭೂಮಿಕೆಯನ್ನು ನಿರ್ಮಾಣ ಮಾಡಿತ್ತು.

2003 ರಲ್ಲಿ ನಮ್ಮ ಹೆಮ್ಮೆಯ ನಾಯಕ ಭಾರತದ ಪ್ರಧಾನಿಯಾಗಿದ್ದ ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯೀ ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರ್ಧಾರ ಕೈಗೊಂಡಿದ್ದರು. ಇದರ ಪರಿಣಾಮವಾಗಿ ರೂಪುಗೊಂಡಿದ್ದೆ ಸಂವಿಧಾನದ 91 ನೇ ತಿದ್ದುಪಡಿ. ತದ ನಂತರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ವ್ಯಾಪಕ ಚರ್ಚೆ, ಸಂವಾದ, ಸಮಾಲೋಚನೆಗಳು ನಡೆದವು. ಅನೇಕ ಸಂವಿಧಾನ ಪರಿಣಿತರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ. ಪ್ರಸಕ್ತ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ಇಂದು ಲೋಕ ಸಭಾಧ್ಯಕ್ಷ ಓ. ಪಿ. ಬಿರ್ಲಾ ಅವರ ಮಾರ್ಗದರ್ಶನದಲ್ಲಿ ಮತ್ತೊಂದು ಚಿಂತನ ಸಭೆ ಆರಂಭಗೊಂಡಿರುವುದು ಸಂತಸದ ವಿಷಯ.

ಇಂದು ನಾವು ಸಂವಿಧಾನದ 10ನೇ ಅನುಸೂಚಿಯಡಿಯಲ್ಲಿ ಉಲ್ಲೇಖಿಸಿರುವ ವಿಧಾನಸಭೆಯ ಸಭಾಪತಿಯ ಅಧಿಕಾರಗಳು ಮತ್ತು ನಿಯಮಗಳ ಮರು ಪರಿಶೀಲನೆ ಮಾಡಲು ಸೇರಿದ್ದೇವೆ. ಮೊದಲಿಗೆ ನಾನು, ಈ ಸಂಬಂಧ ಮೂವರ ಸದಸ್ಯರ ಸಮಿತಿಯನ್ನು ರಚಿಸಿರುವ ಗೌರವಾನ್ವಿತ ಲೋಕಸಭೆಯ ಸಭಾಪತಿ ಶ್ರೀ ಓ ಪಿ ಬಿರ್ಲಾ ಅವರ ನಡೆಯನ್ನು ಶ್ಲಾಘಿಸುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆಯು ಎಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯು ಅಪ್ರಸ್ತುತ ಎಂಬ ವಿಚಾರವನ್ನು ನಾನು ಒಪ್ಪುವುದಿಲ್ಲ.

ದಿವಂಗತ ಪ್ರಧಾನಿ ರಾಜೀವ ಗಾಂಧಿಯವರ ಅಂದಿನ ಕಾಂಗ್ರೆಸ್ ಸರ್ಕಾರ 1985 ರಲ್ಲಿ ಜಾರಿಗೆ ತಂದ ಕಾನೂನನ್ನು ಸುಮಾರು 35 ವರ್ಷಗಳ ತರುವಾಯ ನಾವು ಚರ್ಚಿಸುತ್ತಿದ್ದೇವೆ. ಬದಲಾದ ಮತ್ತು ಸತತವಾಗಿ ಬದಲಾಗುವ ರಾಜಕೀಯ ಸ್ಥಿತ್ಯಂತರಗಳನ್ನೂ ಗಮನದಲ್ಲಿಟ್ಟು ಈ ಕಾನೂನು ಕಾಲಾನುಸಾರ ಬದಲಾಗಬೇಕು, ಗಟ್ಟಿಗೊಳ್ಳಬೇಕು. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯೀ ಅವರು 91 ನೇ ಸಂವಿಧಾನ ತಿದ್ದುಪಡಿ ಮೂಲಕ ಸದಸ್ಯರ ಪಕ್ಷಾಂತರ ಮಿತಿಯನ್ನು 2/3 ಭಾಗಕ್ಕೆ ಹೆಚ್ಚಿಸಿ ಪಕ್ಷಾಂತರಕ್ಕೆ ಕಡಿವಾಣ ಹಾಕಿದರು. ಅಷ್ಟೇ ಅಲ್ಲದೇ, ಮಂತ್ರಿಗಿರಿಯ ಆಮಿಷ ಒಡ್ಡುವ ತಂತ್ರಕ್ಕೆ ಪ್ರತಿ ತಂತ್ರವಾಗಿ ಮಂತ್ರಿ ಮಂಡಲದ ಸದಸ್ಯರ ಸಂಖ್ಯೆಯನ್ನು ಸದನದ 15 ಪ್ರತಿಶತಕ್ಕಿಂತ ಹೆಚ್ಚಿಗೆಯಾಗದಂತೆ ನಿಗದಿ ಗೊಳಿಸಿದರು. ಆದರೂ ಸಹ ಪಕ್ಷಾಂತರವು ಅವ್ಯಾಹತವಾಗಿ ನಡೆಯುತ್ತಿದೆ.

ಸಭಾಪತಿಯ ಕಾರ್ಯವೈಖರಿಯು ಪಕ್ಷಪಾತಿಯಾಗಿರುವುದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ನವೆಂಬರ್ 2019 ರಲ್ಲಿ ಸುಪ್ರೀಂ ಕೋರ್ಟ್ ಅವಲೋಕಿಸಿದಿರುವುದರಿಂದ ಇಂದಿನ ಚರ್ಚೆಯು ಹೆಚ್ಚಿನ ಮಹತ್ವ ಪಡೆದಿದೆ. ಈ ಹಿಂದೆ ತಜ್ಞರ ಸಮಿತಿಯು ಚುನಾವಣಾ ಆಯೋಗದ ಸಲಹೆ ಮೇರೆಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿ ( ಲೋಕ ಸಭಾ ಸದಸ್ಯರಿಗೆ) ಮತ್ತು ರಾಜ್ಯಪಾಲರಿಗೆ (ವಿಧಾನಸಭಾ ಸದಸ್ಯರಿಗೆ) ನೀಡಬೇಕೆಂದು ಸಲಹೆ ನೀಡಿತ್ತು. ಆದರೆ, ಸದನಲ್ಲಿ ಸಭಾಪತಿಯೇ ಪ್ರಧಾನ. ಆದಾಗ್ಯೂ, ಸಭಾಪತಿಯ ನಿರ್ಣಯವು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ.

ಪ್ರಸ್ತುತ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸಭಾಪತಿಯಯವರಿಗೆ ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಯಾವುದೇ ಕಾಲ ಮಿತಿಯನ್ನು ನಿಗದಿಗೊಳಿಸಿಲ್ಲ. ಹಾಗಾಗದೆ, ಒಂದು ನಿರ್ದಿಷ್ಟ ಕಾಲಮಿತಿ ನಿಗದಿಗೊಳಿಸುವುದು ಸೂಕ್ತ. ಉದಾಹರಣೆಗೆ , 2015 ರಲ್ಲಿ ಶಾಸಕನ ಅನರ್ಹ ಪ್ರಕ್ರಿಯೆ ಬಗ್ಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ತೆಲಂಗಾಣ ವಿಧಾನ ಸಭೆಯ ಸಭಾಪತಿ ನಿರ್ಧಾರ ಕೈಗೊಳ್ಳದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಹೈದರಾಬಾದ್ ಹೈ ಕೋರ್ಟ್ ಮಧ್ಯ ಪ್ರವೇಶಿಸಲಿಲ್ಲ. ಮತ್ತೊಂದು, ಪಕ್ಷಾಂತರ ನಿಷೇಧ ಕಾಯ್ದೆಯ ನ್ಯೂನ್ಯತೆ ಎಂದರೆ, ಒಬ್ಬ ಜನ ಪ್ರತಿನಿಧಿ ಪಕ್ಷದ ನಿಯಮಕ್ಕೆ, ಆಜ್ಞೆಗೆ ಕಟ್ಟು ಬಿದ್ದು ತನ್ನ ಆತ್ಮಸಾಕ್ಷಿಯ ವಿರುದ್ಧ ಒಂದು ವಿಷಯದ ಮೇಲೆ ಮತ ಹಾಕುವುದು.

ತನ್ನನ್ನು ಆಯ್ಕೆ ಮಾಡಿದ ಜನರ ಹಿತಾಸಕ್ತಿ ವಿರುದ್ಧ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಮತ ಚಲಾಯಿಸ ಬೇಕಾಗುತ್ತದೆ. ವಿರುದ್ಧವಾಗಿ ಮತ ಚಲಾಯಿಸಿದರೆ ಅನರ್ಹಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಅಂತಹ ಸದಸ್ಯರನ್ನು ಅನರ್ಹರೆನ್ನಬೇಕೆ? ಬದಲಾಗಿ, ಸರ್ಕಾರದ ಅಳಿವು ಉಳಿವಿನ ವಿಷಯದ ಸಂದರ್ಭದಲ್ಲಿ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಗಣಿಸಬೇಕು ಎಂದು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನಸಭೆಯ ಉಪ ಸಭಾಪತಿ ಚಂದ್ರಶೇಖರ ಮಾಮನಿ, ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್, ಮಾಜಿ ಸಭಾಪತಿ ಕೆ ಆರ್. ರಮೇಶ್ ಕುಮಾರ್, ಕೆ.ಜಿ.ಬೋಪಯ್ಯ ಸೇರಿದಂತೆ ಅನೇಕ ಹಿರಿಯ ಸದಸ್ಯರುಗಳು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಪಕ್ಷಗಳ ಮಟ್ಟದಲ್ಲಿ ಆಂತರಿಕ ಸಭೆ ನಡೆಸಿ ಮತ್ತಷ್ಟು ಅಂಶಗಳನ್ನು ಲಿಕಿತ ರೂಪದಲ್ಲಿ ಸಲ್ಲಿಸಲಾಗುವುದು ಎಂದು ಒಮ್ಮತದ ಅಭಿಪ್ರಾಯವನ್ನು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English