ಮಂಗಳೂರು : ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿ, ಎರಡು ತಿಂಗಳ ಬಿಲ್‍ಗಳನ್ನು ಒಟ್ಟಿಗೆ ನೀಡಿದ್ದರೂ, ನಿಗದಿತ ಸರಾಸರಿ ದರಕ್ಕಿಂದ ಹೆಚ್ಚು ಮೊತ್ತದ ಬಿಲ್ ಮೆಸ್ಕಾಂ ನೀಡಿರುವುದರ ಬಗ್ಗೆ ಸಾರ್ವಜನಿಕರ ಅಸಮಾಧಾನ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಶನಿವಾರ ಮತ್ತೊಮ್ಮೆ ಸಭೆ ನಡೆಸಿ, ಗ್ರಾಹಕರಿಗೆ ಅನ್ಯಾಯವಾಗದಂತೆ ಗಮನಹರಿಸಲು ನಿರ್ದೇಶಿಸಲಾಗುವುದು ಎಂದು ಹೇಳಿದರು.
ಮೀನುಗಾರಿಕೆ ಅವಧಿಯನ್ನು ಕೇಂದ್ರ ಸರಕಾರ ಜೂನ್ 15ರವರೆಗೆ ವಿಸ್ತರಿಸಿ ಆದೇಶಿಸಿದೆ. ರಾಜ್ಯ ಸರಕಾರವೂ ಇದರನ್ವಯ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ವಿಮಾ ಕಂಪೆನಿ ಸೇರಿದಂತೆ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ರಾಜ್ಯದಲ್ಲಿ ಒಳನಾಡ ಮೀನುಗಾರಿಕೆ ಅಭಿವೃದ್ಧಿಪಡಿಸಲು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಮುಂದಿನ 10 ವರ್ಷದಲ್ಲಿ ಮೀನುಮರಿ ಉತ್ಪಾದನೆ ಸೇರಿದಂತೆ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಜೂನ್ 1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಮತ್ತಿತರ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರದ ಅನುಮೋದನೆ ನಿರೀಕ್ಷೆಯಲ್ಲಿದ್ದೇವೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English