ಕಲಬುರ್ಗಿ : ಕಳೆದ ಏಪ್ರಿಲ್ 26 ರಂದು ಎಲ್ಲೆಡೆ ಸರಕಾರದ ರಜೆಯಿದ್ದ ಬಸವ ಜಯಂತಿಯಂದು ಎಲ್ಲರೂ ಸಂಭ್ರಮವಾಗಿ ಬಸವೇಶ್ವರರ ಭಾವಚಿತ್ರ ವನ್ನಿಟ್ಟು ಪೂಜೆ ಸಲ್ಲಿಸಿದ್ದರು.
ಆದರೆ, ಅಂದು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಾಮನೂರು ಶಿವಶಂಕ್ರಪ್ಪ ಬಸವೇಶ್ವರರಿಗೆ ಅವಮಾನಿಸಿದ್ದಾರೆ ಎಂದು ನೋಟೀಸ್ ನೀಡಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿಯ ಅಧ್ಯಕ್ಷರಾಗಿರುವ ಶಾಮನೂರು ಅವರು, 12 ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ಕ್ರಾಂತಿಕಾರಿ ವಿಚಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಬಸವೇಶ್ವರರ ಅನುಯಾಯಿಗಳು ಮತ್ತು ಅವರ ತತ್ವಗಳನ್ನು ಪಾಲಿಸುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಮತ್ತು ಮಹಾ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶಟಗಾರ ಅವರು ವಕೀಲ ಸುಭಾಷ್ ಕೋಣಿನ್ ಅವರ ಮೂಲಕ ಶಾಮನೂರು ಅವರಿಗೆ ನೋಟೀಸ್ ನೀಡಿದ್ದಾರೆ.
ಪ್ರತಿ ವರ್ಷ ಬಸವ ಜಯಂತಿಯನ್ನು ಬಸವೇಶ್ವರರ ಫೋಟೋ ಇಟ್ಟು ಪೂಜಿಸಲಾಗುತ್ತದೆ. ಆದರೆ, ನೀವೇಕೆ ಎತ್ತುಗಳಿಗೆ ಏಕೆ ಪೂಜೆ ಸಲ್ಲಿಸಿ ಲಿಂಗಾಯಿತ ಸಮಾಜದವರನ್ನು ಮತ್ತು ಬಸವೇಶ್ವರರ ಪ್ರಭಾವದಿಂದ ಅವರ ಆದರ್ಶಗಳನ್ನು ಪಾಲಿಸುತ್ತಿರುವವರನ್ನು ಅವಮಾನಿಸಿದ್ದೀರಿ. ಇದರಿಂದ ಲಿಂಗಾಯಿತ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತರಲು ಪ್ರಯತ್ನಿಸುತ್ತಿರುವುದೇಕೆ ಎಂದು ನೋಟೀಸ್ ನಲ್ಲಿ ಕೇಳಲಾಗಿದೆ.
ನೋಟೀಸ್ ಗೆ ಉತ್ತರ ನೀಡಲು ಶಾಮನೂರು ಅವರಿಗೆ 15 ದಿನಗಳ ಗಡುವು ನೀಡಲಾಗಿದೆ. ಅವರ ಉತ್ತರ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಪ್ರಭುಲಿಂಗ ತಿಳಿಸಿದ್ದಾರೆ.
Click this button or press Ctrl+G to toggle between Kannada and English