ಹುಬ್ಬಳ್ಳಿ : ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜನರು ಎಲೆ, ಅಡಿಕೆಯೊಂದಿಗೆ ತಂಬಾಕು ಸೇವನೆ ಸಾಮಾನ್ಯವಾಗಿರಿಸಿಕೊಂಡಿರುತ್ತಾರೆ. ಇನ್ನು ಕೆಲವರು ಗುಟ್ಕಾ ತಿನ್ನುವ ಅಭ್ಯಾಸ ಮಾಡಿಕೊಂಡರೆ, ಕೆಲವರು ತಂಬಾಕು, ಸುಣ್ಣ ತಿನ್ನುವ ರೂಢಿ ಮಾಡಿಕೊಂಡಿರುತ್ತಾರೆ. ಚಟಗಳಿಲ್ಲದೇ ಬದುಕುವುದು ಇಂಥಹವರಿಗೆ ಕಷ್ಟವೇ ಸರಿ.
ಆದರೆ, ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ರಾಜ್ಯ ಸರಕಾರ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು ಇಂದು ಆಚರಿಸಲಾಗುತ್ತಿದ್ದು ಕೋವಿಡ್ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳನ್ನು ತಿಂದು ಉಗಿಯುವುದರಿಂದ ಸೋಂಕು ಹರಡುವ ಸಂಭವವಿರುವುದರಿಂದ ನಿಷೇಧ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಅಕಸ್ಮಾತಾಗಿ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ತಿನ್ನುವವರು ಉಗುಳಿದರೆ ಅವರ ವಿರುದ್ಧ ಕಾನೂನಿನಡಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯವರು ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರವು 2019 ರಲ್ಲಿಯೇ ತಂಬಾಕು ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿತ್ತು. ನಿಷೇಧದ ವಿರುದ್ಧ ಕೆಲವರು ಕೋರ್ಟ್ ಗೆ ಹೋಗಿದ್ದರು. ಅಲ್ಲಿ ಮಾರಾಟ ನಿಷೇಧಕ್ಕೆ ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ಇದ್ದು, ಕೋರ್ಟ್ ತೀರ್ಪು ಇನ್ನೂ ಬಂದಿಲ್ಲ. ಈಗ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ವರದಿ : ಶಂಭು,
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English