ಹುಬ್ಬಳ್ಳಿ : ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಸರಕಾರದಲ್ಲಿ ಸಚಿವರಾಗಿರುವ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಬಿಜೆಪಿಯ ಕೆಲ ನಾಯಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಬಿಜೆಪಿಯ ಹೈಕಮಾಂಡ್ ಬಾಗಿಲಿಗೆ ಹೋಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದ ರಾಜಕೀಯದಲ್ಲಿ ಯಾವುದೇ ಕ್ಷಣದಲ್ಲೂ ಬದಲಾವಣೆಯಾಗಬಹುದು ಎಂದಿರುವ ಜಾರಕಿಹೊಳಿ, ಯಡಿಯೂರಪ್ಪ ಅವರ ಬದಲಾವಣೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಕೇಂದ್ರದ ನಾಯಕರೂ ಕೈಜೋಡಿಸಿದ್ದಾರೆ ಎಂದರು. ಇನ್ನು ಉತ್ತರ ಕರ್ನಾಟಕದಿಂದ ಆರಿಸಿ ಬಂದಿರುವ ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್ ನಿಂದ ಬಿಜೆಪಿ ಪಕ್ಷ ಸೇರಿಕೊಂಡಿರುವ ಕೆಲವರು ಇದಕ್ಕೆ ಬೆಂಬಲಿಸಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಒಮ್ಮೆ ಮುಖ್ಯಮಂತ್ರಿಯ ಗದ್ದುಗೆ ಏರಿದ ಶೆಟ್ಟರ್ ಅಥವಾ ಜೋಶಿ ಅವರ ಅದೃಷ್ಟ ಏನಿದೆಯೋ ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
ವರದಿ: ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English