ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಧರ್ಮಸ್ಥಳದ ಮೂಲಕ ಸಾಗುವ ನೇತ್ರಾವತಿ ನದಿಗೆ ಕಾಯಕಲ್ಪ

9:28 PM, Thursday, June 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

netravathi ಧರ್ಮಸ್ಥಳ : ನದಿಗಳು ನಿತ್ಯ ಚಲನಶೀಲವಾಗಿದ್ದು ಕ್ರಿಯಾಶೀಲ ವಾಗಿರುತ್ತವೆ. ನದಿಗಳ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಹಲವು ನದಿ-ತೊರೆಗಳನ್ನು ಸೇರಿಸಿಕೊಂಡು ತಮ್ಮಉಭಯ ಮಗ್ಗುಲುಗಳಲ್ಲಿ ಜನರಿಗೆ ಉಪಯುಕ್ತ ವಾಗುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದೇ ಕರೆಯಲ್ಪಡುವ ನೇತ್ರಾವತಿ ನದಿಯ ಉಗಮಸ್ಥಾನ ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಘಾಟಿಯ ಬ೦ಗ್ರ ಬಲಿಗೆ ಕಣಿವೆ ಆಗಿದೆ.

ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದ ಮೂಲಕ ಹರಿದು ಹೋಗುವ ನೇತ್ರಾವತಿ ನದಿ ಪುಣ್ಯನದಿ ಎಂದು ಮಾನ್ಯತೆ ಹೊಂದಿದ್ದು ಧರ್ಮಸ್ಥಳಕ್ಕೆ ಬರುವ ಭಕ್ತರು ನದಿಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗುವುದು ಸಂಪ್ರದಾಯವಾಗಿದೆ.
|
ನೇತ್ರಾವತಿ ನದಿಯು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯೊಂದಿಗೆ ಸಂಗಮವಾಗಿ ಬಂಟ್ವಾಳದ ಮೂಲಕ ಹರಿದು ಮಂಗಳೂರಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಮಳೆಗಾಲದಲ್ಲಿ ನದಿ ನೀರಿನೊಂದಿಗೆ ಮರಳು, ತ್ಯಾಜ್ಯ, ಮುರಿದು ಬಿದ್ದ ಮರದ ತುಂಡುಗಳು ಬರುವುದರಿಂದ ಕೃತಕ ನೆರೆ ಉಂಟಾಗುತ್ತದೆ. ನದಿಯ ಉಭಯ ಮಗ್ಗುಲಲ್ಲಿ ವಾಸಿಸುವ ಜನರಿಗೆ ಅವರ ಮನೆ ಹಾಗೂ ಕೃಷಿಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಈ ರೀತಿ ಅಲ್ಲಲ್ಲಿ ಕೃತಕ ನೆರೆಉಂಟಾಗುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ಬೆಳ್ತಂಗಡಿ ತಾಲೂಕಿನ ದಿಡುಪೆ, ಕಿಲ್ಲೂರು, ಚಾರ್ಮಾಡಿ, ಕೊಳಂಬೆ ಮೊದಲಾದ ಕಡೆಗಳಲ್ಲಿ ನೆರೆಯಿಂದಾಗಿ ಅಪಾರ ಹಾನಿ ಉಂಟಾಗಿತ್ತು.

ಪುಣ್ಯನದಿ ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದೇ ಕರೆಯಲ್ಪಡುತ್ತದೆ. ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೂಲವೇ ನೇತ್ರಾವತಿ ನದಿ. ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಜನರು ಕುಡಿಯುವ ನೀರು, ಕೃಷಿ ಹಾಗೂ ತೋಟಗಳಿಗೆ ನೇತ್ರಾವತಿ ನದಿ ನೀರನ್ನು ಬಳಸುತ್ತಾರೆ.

ಧರ್ಮಸ್ಥಳಧಲ್ಲಿ ನೇತ್ರಾವತಿ ಸ್ನಾನಘಟ್ಟದಲ್ಲಿ ನದಿಯಲ್ಲಿ ಮರಳು, ಹೂಳು, ತ್ಯಾಜ್ಯ ವಸ್ತುಗಳು ತುಂಬಿಕೊಂಡು ನದಿನೀರಿನ ಸುಗಮ ಹರಿವಿಗೆ ಅಡಚಣೆಯಾಗುತ್ತದೆ.  ಇದರಿಂದ ನದಿಯ ಎರಡೂ ಬದಿಗಳಲ್ಲಿ ಮಣ್ಣಿನ ಸವೆತ ಆಗುತ್ತದೆ. ಅಧಿಕ ನೆರೆ ಬಂದಾಗ ನದಿಯು ತನ್ನ ಹರಿವಿನ ದಿಕ್ಕನ್ನು ಬದಲಾಯಿಸುವ ಸಾಧ್ಯತೆ ಇದೆ.

ನದಿಯಲ್ಲಿ ತುಂಬಿ ಕೊಂಡಿರುವ ಮರಳು, ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಆಗಾಗ ತೆಗೆದಲ್ಲಿ ನದಿ ಸ್ವಚ್ಛವಾಗಿ ನೀರಿನ ಸುಗಮ ಹರಿವಿಗೆ ಅನುಕೂಲವಾಗುತ್ತದೆ. ಈ ದಿಸೆಯಲ್ಲಿ “ನೇತ್ರಾವತಿ” ನದಿಗೆ ಕಾಯಕಲ್ಪ ನೀಡಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English